

ಅಮ್ಮಾನ್(ಜೋರ್ಡಾನ್): ಆರು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ವಿಶ್ವ ನಂ. 1 ಬಾಕ್ಸರ್ ಅಮಿತ್ ಪಾಂಗಲ್ ಮತ್ತು ಸಿಮ್ರನ್ಜಿತ್ ಕೌರ್ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದಾರೆ.
ಏಷ್ಯಾ-ಓಶಿಯಾನಿಯಾ ಬಾಕ್ಸಿಂಗ್ ಅರ್ಹತಾ ಕೂಟದಲ್ಲಿ ಸೆಮಿಫೈನಲ್ಗೇರುವ ಮೂಲಕ ಇವರೆಲ್ಲರೂ ಈ ಸಾಧನೆ ಮಾಡಿದ್ದು, ಒಲಿಂಪಿಕ್ಸ್ ಟಿಕೆಟ್ ಖಾತ್ರಿ ಪಡಿಸಿಕೊಂಡ ಭಾರತೀಯ ಬಾಕ್ಸರ್ಗಳ ಸಂಖ್ಯೆ 8ಕ್ಕೇರಿದೆ. 63 ಕೆಜಿ ವಿಭಾಗದಲ್ಲಿ ಮನೀಷ್ ಕೌಶಿಕ್ ಕ್ವಾರ್ಟರ್ಫೈನಲ್ನಲ್ಲಿ ಸೋಲು ಕಂಡರೂ, ಒಲಿಂಪಿಕ್ಸ್ ಅರ್ಹತೆಯ ರೇಸ್ನಲ್ಲಿ ಉಳಿದುಕೊಂಡಿದ್ದರೆ, ಮಹಿಳೆಯರ ವಿಭಾಗದಲ್ಲಿ ಸಾಕ್ಷಿ ಚೌಧರಿ 8ರ ಘಟ್ಟದಲ್ಲಿ ಸೋತು ಒಲಿಂಪಿಕ್ಸ್ ಅರ್ಹತೆಯಿಂದ ವಂಚಿತರಾಗಿದ್ದಾರೆ.
37 ವರ್ಷದ ಮೇರಿ ಕೋಮ್ ಮಹಿಳೆಯರ 51 ಕೆಜಿ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಫಿಲಿಪ್ಪಿನ್ಸ್ನ ಐರಿಸ್ ಮ್ಯಾಂಗೋಗೆ 5-0ಯಿಂದ ಸೋಲುಣಿಸಿದರು. ವಿಶ್ವ ಬಾಕ್ಸಿಂಗ್ ರಜತ ವಿಜೇತ ಅಮಿತ್ ಪಾಂಗಲ್ 52 ಕೆಜಿ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಫಿಲಿಪ್ಪಿನ್ಸ್ನ ಕಾಲೋ ಪಾಲಂ ವಿರುದ್ಧ 4-1ರಿಂದ ಸುಲಭ ಗೆಲುವು ದಾಖಲಿಸಿದರು. ಸಿಮ್ರಾನ್ಜಿತ್ ಕೌರ್ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಸೆಮಿಫೈನಲ್ಗೇರಿ ಒಲಿಂಪಿಕ್ಸ್ ಟಿಕೆಟ್ ಸಂಪಾದಿಸಿದರು.
ಮನೀಷ್ ಕೌಶಿಕ್ 2-3ರಿಂದ ಮಂಗೋಲಿ ಯಾದ ಬಾಟರ್ಸಖ್ ವಿರುದ್ಧ ಸೋಲು ಕಂಡರು. ಇನ್ನು ಕ್ವಾರ್ಟರ್ಫೈನಲ್ನಲ್ಲಿ ಸೋತವರ ನಡುವೆ ನಡೆಯಲಿರುವ ಬಾಕ್ಸ್ -ಆಫ್ನಲ್ಲಿ ಗೆದ್ದರೆ ಕೌಶಿಕ್ಗೆ ಒಲಿಂಪಿಕ್ಸ್ ಅರ್ಹತೆ ಗಳಿಸುವ ಅವಕಾಶವಿದೆ. ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಸಾಕ್ಷಿ ಚೌಧರಿ ಮಹಿಳೆಯರ 57 ಕೆಜಿ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಸೋತರು. ಭಾನುವಾರ ಭಾರತದ ಐವರಿಗೆ ಒಲಿಂಪಿಕ್ಸ್ ಟಿಕೆಟ್ ಖಾತ್ರಿಯಾಗಿತ್ತು.