

ನವದೆಹಲಿ: 18ನೇ ಆವೃತ್ತಿ ಐಪಿಎಲ್ ಶುರುವಾಗುವುದಕ್ಕೆ ಹಲವು ತಿಂಗಳುಗಳು ಬಾಕಿ ಉಳಿದಿದ್ದು, ಇದಕ್ಕೂ ಮುಂಚಿತವಾಗಿಯೇ ತಂಡಗಳ ಬಗ್ಗೆ ಮಾಜಿ ಆಟಗಾರರು ನೀಡುತ್ತಿರುವ ಹೇಳಿಕೆಗಳು ಸಖತ್ ಸೌಂಡ್ ಮಾಡುತ್ತಿದೆ. ಪ್ರತಿಬಾರಿಯೂ ಕಪ್ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಯಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತದೆ. ಇದೀಗ ಆರ್ಸಿಬಿ ಕಪ್ ಗೆಲ್ಲದಿರುವ ಕುರಿತು ತಂಡದ ಮಾಜಿ ಆಟಗಾರ ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದ್ದು, ಫ್ರಾಂಚೈಸಿ ಈ ಬಗ್ಗೆ ಗಮನಹರಿಸಬೇಕಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಭರ್ಜರಿ ಭಕಮ್ಬ್ಯಾಕ್ ಮಾಡುವ ಮೂಲಕ ಸುದ್ದಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಹ್ಲಿ, ಡಿವಿಲಿಯರ್ಸ್, ಕ್ರಿಸ್ ಗೇಲ್ನಂತಹ ದಿಗ್ಗಜ ಆಟಗಾರರು ಇದ್ದರೂ ಸಹ ತಂಡ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿರುವುದಕ್ಕೆ ಮಾಜಿ ಆಟಗಾರ ಪಾರ್ಥೀವ್ ಪಟೇಲ್ ಕಾರಣವನ್ನು ಬಿಚ್ಚಿಟ್ಟಿದ್ದು, ಇವರ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ನಾನು ಆರ್ಸಿಬಿ ಪರ ನಾಲ್ಕು ಸೀಸನ್ ಆಡಿದ್ದೇನೆ. ಆರ್ಸಿಬಿ ಮ್ಯಾನೇಜ್ಮೆಂಟ್ ತಂಡಕ್ಕಿಂತ ಹೆಚ್ಚಾಗಿ ವ್ಯಕ್ತಿಗಳ ಬಗ್ಗೆ ಯೋಚಿಸುತ್ತದೆ. ಆ ಬಳಿಕ ತಂಡದ ಹೊರಹೋದವರು ಈ ಬಗ್ಗೆ ಹೇಳೇ ಹೇಳುತ್ತಾರೆ. ನಾನಿದ್ದಾಗ ವಿರಾಟ್, ಎಬಿಡಿ, ಗೇಲ್ಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಅವರು ಆಡುವಾಗ ಉದ್ದೇಶ ಸ್ಪಷ್ಟವಾಗಿತ್ತು. ಈ ಕಾರಣಕ್ಕಾಗಿಯೇ ಆರ್ಸಿಬಿ ಈವರೆಗೂ ಕಪ್ ಗೆದ್ದಿಲ್ಲ ಎಂದು ತಂಡದ ಮಾಜಿ ಆಟಗಾರ ಪಾರ್ಥೀವ್ ಪಟೇಲ್ ದೂರಿದ್ದಾರೆ.
ಇತ್ತ ಪಾರ್ಥೀವ್ ಪಟೇಲ್ ಅವರ ಹೇಳಿಕೆ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಯಾವ ಆಧಾರದ ಮೇಲೆ ಹೇಳಿಕೆ ಕೊಟ್ಟರೂ ಎಂಬುದು ಸ್ಪಷ್ಟವಾಗಿಲ್ಲ. ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.