ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ನೌಕೌಟ್ ಆಸೆಗೆ ಅಡ್ಡಿಯಾದ ಪುಣೇರಿ ಪಲ್ಟಾನ್

New-Project-5-2
Published on

ನವದೆಹಲಿ: ನಾಯಕ ಅಸ್ಲಾಂ ಇನಾಮ್ದಾರ್ (11) ನಡೆಸಿದ 7 ಯಶಸ್ವಿ ರೈಡಿಂಗ್ ಎದುರು ಮಂಕಾದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಹಾಲಿ ರನ್ನರ್‌ಅಪ್ ಪುಣೇರಿ ಪಲ್ಟಾನ್ ಎದುರು 31-40 ಅಂಕಗಳಿಂದ ಪರಾಭವಗೊಂಡಿದೆ. ಇದರೊಂದಿಗೆ ಬುಲ್ಸ್ ಪ್ಲೇಆ್ ಹಾದಿ ಕಠಿಣಗೊಂಡಿದೆ. ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ನೀರಸ ಪ್ರದರ್ಶನ ತೋರಿತು.

ಮೊದಲಾರ್ಧದಲ್ಲಿ ಪುಣೇರಿ 13-18ರಿಂದ ಮುನ್ನಡೆ ಸಾಧಿಸಿತು. ದ್ವಿತೀರ್ಯಾದದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಪುಣೇರಿ ಆಲೌಟ್ ಅಂಕ ಕಲೆಹಾಕಿತು. ಕೊನೇ ನಿಮಿಷಗಳಲ್ಲಿ ಬುಲ್ಸ್ ತಿರುಗೇಟು ನೀಡಲು ಪ್ರಯತ್ನಿಸಿದರೂ ಪಂದ್ಯ ಕೈಜಾರಿತು. ಬುಲ್ಸ್ ಪರ ಸುಶೀಲ್ (9) ಏಕಾಂಗಿ ಹೋರಾಟ ನಡೆಸಿದರು.

ನಾಕೌಟ್ ಹಾದಿ ದುರ್ಗಮ: ಬೆಂಗಳೂರು ಬುಲ್ಸ್ ತಂಡ ಟೂರ್ನಿಯಲ್ಲಿ ಆಡಿರುವ 19 ಪಂದ್ಯಗಳಲ್ಲಿ 7 ಗೆಲುವು, 10 ಸೋಲು ಹಾಗೂ 2 ಟೈ ಸಾಧಿಸಿ 48 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಕೊನೇ 3 ಪಂದ್ಯಗಳಲ್ಲಿ ಗುಜರಾತ್, ಹರಿಯಾಣ ಹಾಗೂ ದೆಹಲಿ ತಂಡಗಳನ್ನು ಎದುರಿಸಲಿದ್ದು, ಬುಲ್ಸ್ ಪಾಲಿಗೆ ಎಲ್ಲ ಪಂದ್ಯಗಳು ಮಾಡು ಇಲ್ಲವೆ ಮಡಿ ಎನಿಸಿವೆ. ಇದುವರೆಗೆ ಹಾಲಿ ಚಾಂಪಿಯನ್ ಜೈಪುರ ಪಿಂಕ್‌ಪ್ಯಾಂಥರ್ಸ್‌, ಪುಣೇರಿ ಪಲ್ಟಾನ್ ಮಾತ್ರ ಪ್ಲೇಆ್ ಸ್ಥಾನ ಖಚಿತಪಡಿಸಿಕೊಂಡಿವೆ. ದಬಾಂಗ್ ದೆಹಲಿ ಇನ್ನೊಂದು ಪಂದ್ಯ ಜಯಿಸಿದರೆ ನಾಕೌಟ್ ಸ್ಥಾನ ಒಲಿಸಿಕೊಳ್ಳಲಿದೆ.

ತಮಿಳು ತಲೈವಾಸ್ 45 ಅಂಕದೊಂದಿಗೆ 8ನೇ ಸ್ಥಾನ, 44 ಪಾಯಿಂಟ್‌ನೊಂದಿಗೆ ಬೆಂಗಾಲ್ ವಾರಿಯರ್ಸ್‌ 9ನೇ ಸ್ಥಾನದಲ್ಲಿದ್ದು, ಅಂಕಪಟ್ಟಿಯ ಅಗ್ರ-6ರಲ್ಲಿ ಸ್ಥಾನ ಪಡೆಯಲು ಗುಜರಾತ್ (55), ಪಟನಾ ಪೈರೇಟ್ಸ್ (58) ಜತೆಗೆ ನಿಕಟ ಪೈಪೋಟಿ ನಡೆಸಲಿವೆ. ಯುಪಿ ಯೋಧಾಸ್, ತೆಲುಗು ಟೈಟಾನ್ಸ್ ಟೂರ್ನಿಯಿಂದ ಹೊರಬಿದ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net