

ನವದೆಹಲಿ: ಮುಂಬರುವ ಐಪಿಎಲ್ 18ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಮುನ್ನ ಪ್ರತಿ ತಂಡಗಳು ರಿಟೇನ್ ಮಾಡಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು ಬಿಸಿಸಿಐ ಬಹುತೇಕ ಅಂತಿಮಗೊಳಿಸಿದೆ. ಬುಧವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ರಿಟೇನ್ ನಿಯಮಾವಳಿಯನ್ನು ಸಿದ್ಧಪಡಿಸಲಾಗಿದ್ದು, ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಇದಕ್ಕೆ ಅಂಗೀಕಾರ ಪಡೆದುಕೊಳ್ಳುವ ನಿರೀಕ್ಷೆ ಇದೆ. ಸಿದ್ಧಪಡಿಸಲಾದ ನಿಯಮಾವಳಿ ಪ್ರಕಾರ, ಪ್ರತಿ ತಂಡ ಗರಿಷ್ಠ ಐವರು ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಲಿದೆ ಎನ್ನಲಾಗಿದೆ.
ಈ ಮುನ್ನ 2022ರ ಹರಾಜಿಗೆ ಮುನ್ನ ಪ್ರತಿ ತಂಡಕ್ಕೆ ಗರಿಷ್ಠ ನಾಲ್ವರು ಆಟಗಾರರನ್ನು ಮಾತ್ರ ರಿಟೇನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಈ ಪೈಕಿ ಗರಿಷ್ಠ 3 ಭಾರತೀಯರು ಮತ್ತು ಗರಿಷ್ಠ ಇಬ್ಬರು ವಿದೇಶಿಯರು ಆಗಿರಬೇಕೆಂದು ಸೂಚಿಸಿತ್ತು. ಆದರೆ ಈ ಬಾರಿ ಪ್ರತಿ ತಂಡ ಗರಿಷ್ಠ ಎಷ್ಟು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಬಿಸಿಸಿಐನಿಂದ ಸ್ಪಷ್ಟತೆ ಸಿಕ್ಕಿಲ್ಲ.
ಇತ್ತೀಚೆಗೆ ಎಲ್ಲ 10 ತಂಡಗಳ ಮಾಲೀಕರು ಬಿಸಿಸಿಐ ಪದಾಧಿಕಾರಿಗಳ ಜತೆಗೆ ನಡೆಸಿದ ಸಭೆಯಲ್ಲಿ, 5-6 ಆಟಗಾರರ ರಿಟೇನ್ ಅವಕಾಶಕ್ಕೆ ಬೇಡಿಕೆ ಇಟ್ಟಿದ್ದರು. ಅದರನ್ವಯ ಬಿಸಿಸಿಐ ಐವರು ಆಟಗಾರರ ರಿಟೇನ್ಗೆ ಅವಕಾಶ ನೀಡುವ ಮೂಲಕ ತಂಡಗಳಿಗೆ ತಮ್ಮ ಬ್ರಾ$್ಯಂಡ್ ಮೌಲ್ಯವನ್ನೂ ರಕ್ಷಿಸಿಕೊಳ್ಳಲು ಅವಕಾಶ ಕಲ್ಪಿಸಲಿದೆ ಎನ್ನಲಾಗಿದೆ.
ಮತ್ತೆ ಆರ್ಟಿಎಂ ಇಲ್ಲ?
ಹರಾಜಿನಲ್ಲಿ ತಂಡಗಳು ತನ್ನ ಮೂಲ ಆಟಗಾರರನ್ನು ಮಾರಾಟವಾಗುವ ಗರಿಷ್ಠ ಮೊತ್ತಕ್ಕೆ ತನ್ನಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡುವ ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ಅನ್ನು ಬಿಸಿಸಿಐ ಈ ಸಲವೂ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎನ್ನಲಾಗಿದೆ. 2018ರಿಂದ ಬಿಸಿಸಿಐ ಹರಾಜಿನಲ್ಲಿ ಈ ನಿಯಮದ ಬಳಕೆಗೆ ಅವಕಾಶ ಕಲ್ಪಿಸಿಲ್ಲ.
ಮುಂಬೈ ಇಂಡಿಯನ್ಸ್ಗೆ ಅನುಕೂಲ!
ಪ್ರತಿ ತಂಡ ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡುವುದರಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ತನ್ನ ಪ್ರಮುಖ ಆಟಗಾರರಾದ ರೋಹಿತ್ ಶರ್ಮ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯರನ್ನು ರಿಟೇನ್ ಮಾಡಲು ನೆರವಾಗಲಿದೆ ಎನ್ನಲಾಗಿದೆ. ಮೂವರು ಭಾರತೀಯ ಆಟಗಾರರನ್ನಷ್ಟೇ ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದರೆ ಮುಂಬೈಗೆ ಇಕ್ಕಟ್ಟು ಎದುರಾಗುತ್ತಿತ್ತು. ಆದರೆ ಈಗ ತನ್ನ ನಾಲ್ಕೂ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಲಭಿಸಿದೆ. ಆದರೆ ರೋಹಿತ್ ಶರ್ಮ, ಸೂರ್ಯಕುಮಾರ್ರಂಥ ಆಟಗಾರರು ಇದನ್ನು ಒಪ್ಪಿಕೊಳ್ಳುವರೇ ಎಂಬ ಕುತೂಹಲವಿದೆ.