ಗೆಲುವಿನ ಖಾತೆ ತೆರೆದ ಮುಂಬೈ ಇಂಡಿಯನ್ಸ್: ನ್ಯಾಟ್ ಸೀವರ್ ಏಕಾಂಗಿ ಹೋರಾಟ

New Project
Published on

ವಡೋದರ: ಅನುಭವಿ ನ್ಯಾಟ್ ಸೀವರ್ ಬ್ರಂಟ್ (57 ರನ್, 39 ಎಸೆತ, 11 ಬೌಂಡರಿ ಹಾಗೂ 26ಕ್ಕೆ 2) ಆಲ್ರೌಂಡ್ ನಿರ್ವಹಣೆಯ ಬಲದಿಂದ ಮುಂಬೈ ಇಂಡಿಯನ್ಸ್ ತಂಡ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲುೃಪಿಎಲ್) ಗುಜರಾತ್ ಜೈಂಟ್ಸ್ ಎದುರು 5 ವಿಕೆಟ್‌ಗಳ ಪ್ರಯಾಸಕರ ಗೆಲುವು ದಾಖಲಿಸಿತು. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಪಡೆ ಅಂಕದ ಖಾತೆ ತೆರೆಯಿತು .

ಕೋಟಂಬಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗುಜರಾತ್ ಜೈಂಟ್ಸ್ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಲ್ಯದ ಜತೆಗೆ, ದಿಟ್ಟ ಜತೆಯಾಟದ ಕೊರತೆ ಎದುರಿಸಿತು. ಆಲ್ರೌಂಡರ್ ಹ್ಯಾಲೆ ಮ್ಯಾಥ್ಯೂಸ್ (16ಕ್ಕೆ 3) ಸಹಿತ ಇತರ ಬೌಲರ್‌ಗಳ ಬಿಗಿ ಬೌಲಿಂಗ್ ದಾಳಿಯ ನಡುವೆಯೂಹರ್ಲೀನ್ ಡಿಯೋಲ್ (32 ರನ್, 31 ಎಸೆತ, 4 ಬೌಂಡರಿ) ಆಸರೆಯಲ್ಲಿ ಗೌರವಯುತ ಮೊತ್ತ ಕಲೆಹಾಕಿ, ಅಂತಿಮವಾಗಿ ಭರ್ತಿ 20 ಓವರ್‌ಗಳಲ್ಲಿ 120 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಎಚ್ಚರಿಕೆ ಚೇಸಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ 16.1 ಓವರ್‌ಗಳಲ್ಲಿ 5 ವಿಕೆಟ್‌ಗೆ 122 ರನ್‌ಗಳಿಸಿ ಗೆಲುವು ಕಂಡಿತು.

ನ್ಯಾಟ್ ಸೀವರ್ ಏಕಾಂಗಿ ಹೋರಾಟ

ಸಾಧಾರಣ ಮೊತ್ತದ ಚೇಸಿಂಗ್‌ನಲ್ಲಿ ಮುಂಬೈ ಬ್ಯಾಟರ್‌ಗಳು ರನ್‌ಗಳಿಸಲು ಪರದಾಡಿದರು. ಹ್ಯಾಲೆ ಮ್ಯಾಥ್ಯೂಸ್ (17) ಹಾಗೂ ಯಸ್ತಿಕಾ ಭಾಟಿಯಾ (8) ಮೊದಲ ವಿಕೆಟ್‌ಗೆ 22 ಎಸೆತಗಳಲ್ಲಿ 22 ರನ್ ಮಾತ್ರಗಳಿಸಿದರು. ಮ್ಯಾಥ್ಯೂಸ್ ನಿರ್ಗಮನದ ಬಳಿಕ ನ್ಯಾಟ್ ಸೀವರ್ ಬ್ರಂಟ್ ತಂಡಕ್ಕೆ ಆಸರೆಯಾಗಿ ನಿಂತರು. ಯಸ್ತಿಕಾ ಜತೆಯಾಗಿ 2ನೇ ವಿಕೆಟ್‌ಗೆ 20 ಎಸೆತಗಳಲ್ಲಿ 24 ರನ್ ಸೇರಿಸಿದರು. ನಾಯಕಿ ಹರ್ಮಾನ್‌ಪ್ರೀತ್ ಕೌರ್ (4) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರೊಂದಿಗೆ ಗುಜರಾತ್ ಕಂಬ್ಯಾಕ್ ಸೂಚನೆ ನೀಡಿತು.

ಆಗ ಜತೆಯಾದ ನ್ಯಾಟ್ ಸೀವರ್ ಹಾಗೂ ಅಮೆಲಿಯಾ (19) ಚೇಸಿಂಗ್ ಸುಲಭಗೊಳಿಸಿದರು. ಈ ಜೋಡಿ 4ನೇ ವಿಕೆಟ್‌ಗೆ 38 ಎಸೆತಗಳಲ್ಲಿ 45 ರನ್‌ಗಳಿಸಿತು. ಸಮಯೋಚಿತ ಬ್ಯಾಟಿಂಗ್ ನಡೆಸಿದಿ ನ್ಯಾಟ್ ಸೀವರ್ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಗೆಲುವಿನಿಂದ 6 ರನ್ ದೂರವಿದ್ದಾಗ ಪ್ರಿಯಾ ಮಿಶ್ರಾ ಎಸೆತದಲ್ಲಿ ಸೀವರ್ ಬೌಲ್ಡ್ ಆದರು. ಸಜೀವನ್ ಸಜನಾ (10*) ಬೌಂಡರಿಯೊಂದಿಗೆ ಮುಂಬೈ ಗೆಲುವು ಸಾರಿದರು.

ಗುಜರಾತ್ ಜೈಂಟ್ಸ್: 20 ಓವರ್‌ಗಳಲ್ಲಿ 120 (ಬೆಥ್ ಮೂನಿ 1, ವೋಲ್ವಾರ್ಡ್ 4, ಡಿ.ಹೇಮಲತಾ 9, ಅಶ್ಲೇ ಗಾರ್ಡ್‌ನರ್ 10, ಹರ್ಲೀನ್ 32, ಡಿಯೆಂಡ್ರಾ 7, ಕಾಶ್ವಿ ಗೌತಮ್ 20, ತನುಜಾ 13, ಸಯಾಲಿ 13*, ಮ್ಯಾಥ್ಯೂಸ್ 16ಕ್ಕೆ 3, ನ್ಯಾಟ್ ಸೀವರ್ 26ಕ್ಕೆ 2, ಅಮೆಲಿಯಾ 22ಕ್ಕೆ 2).

ಮುಂಬೈ ಇಂಡಿಯನ್ಸ್: 16.1 ಓವರ್‌ಗಳಲ್ಲಿ 5 ವಿಕೆಟ್‌ಗೆ 122 (ಮ್ಯಾಥ್ಯೂಸ್ 17, ಯಸ್ತಿಕಾ ಭಾಟಿಯಾ 8, ನ್ಯಾಟ್ ಸೀವರ್ 57, ಹರ್ಮಾನ್‌ಪ್ರೀತ್ 4, ಅಮೆಲಿಯಾ 19, ಸಜನಾ 10*, ಕಾಶ್ವಿ 15ಕ್ಕೆ 2, ಪ್ರಿಯಾ 40ಕ್ಕೆ 2.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net