ಲಖನೌಗೆ ಹ್ಯಾಟ್ರಿಕ್ ಗೆಲುವು: ಯಶ್ ಠಾಕೂರ್‌ಗೆ ಐದು ವಿಕೆಟ್ ಗೊಂಚಲು

New-Project-6
Published on

ಲಖನೌ: ಯುವ ವೇಗಿ ಯಶ್ ಠಾಕೂರ್ (30ಕ್ಕೆ 5) ಚೊಚ್ಚಲ ಐದು ವಿಕೆಟ್ ಗೊಂಚಲು ಸಾಧನೆಯ ನೆರವಿನಿಂದ ಆತಿಥೇಯ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-17ರಲ್ಲಿ ಹಾಲಿ ರನ್ನರ್‌ಅಪ್ ಗುಜರಾತ್ ಟೈಟಾನ್ಸ್ ಎದುರು 33 ರನ್‌ಗಳಿಂದ ಗೆಲುವು ದಾಖಲಿಸಿದೆ. ಕೆಎಲ್ ರಾಹುಲ್ ಬಳಗ ಹ್ಯಾಟ್ರಿಕ್ ಜಯದೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದರೆ, ಸತತ 2ನೇ ಸೋಲಿನ ನಡುವೆ ಶುಭಮಾನ್ ಗಿಲ್ ಪಡೆ 7 ಸ್ಥಾನದಲ್ಲಿ ಉಳಿದಿದೆ.

ಏಕನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಲಖನೌ, ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ (58 ರನ್, 43 ಎಸೆತ, 4 ಬೌಂಡರಿ, 2 ಸಿಕ್ಸರ್) ಅರ್ಧಶತಕ ಹಾಗೂ ಉಪನಾಯಕ ನಿಕೋಲಸ್ ಪೂರನ್ (32*) ಆಸರೆಯಲ್ಲಿ 5 ವಿಕೆಟ್‌ಗೆ 163 ರನ್ ಕಲೆಹಾಕಿತು. ಪ್ರತಿಯಾಗಿ ಆಲ್ರೌಂಡರ್ ಕೃನಾಲ್ ಪಾಂಡ್ಯ (11ಕ್ಕೆ 3) ಹಾಗೂ ಯಶ್ ಠಾಕೂರ್ ದಾಳಿಗೆ ನಲುಗಿದ ಗುಜರಾತ್ ಟೈಟಾನ್ಸ್ 18.5 ಓವರ್‌ಗಳಲ್ಲಿ 130 ರನ್‌ಗಳಿಗೆ ಸರ್ವಪತನ ಕಂಡಿತು.

ಗುಜರಾತ್‌ಗೆ ಕಡಿವಾಣ: ನಾಯಕ ಶುಭಮಾನ್ ಗಿಲ್ (19) ಹಾಗೂ ಸಾಯಿ ಸುದರ್ಶನ್ (31) ಮೊದಲ ವಿಕೆಟ್‌ಗೆ 39 ಎಸೆತಗಳಲ್ಲಿ 54 ರನ್‌ಗಳಿಸಿ ಉತ್ತಮ ಆರಂಭ ಒದಗಿಸಿದರು. ಯಶ್ ಠಾಕೂರ್ ಈ ಜೋಡಿಗೆ ಬ್ರೇಕ್ ಹಾಕಿದರು. ಬಳಿಕ ಇಂಪ್ಯಾಕ್ಟ್ ಆಟಗಾರ ಕೇನ್ ವಿಲಿಯಮ್ಸನ್ (1) ವಿಕೆಟ್ ಪಡೆದ ರವಿ ಬಿಷ್ಣೋಯಿ ಪೆಟ್ಟು ನೀಡಿದರು. ಬಳಿಕ ಬಿಆರ್ ಶರತ್ (2), ವಿಜಯ್ ಶಂಕರ್ (17), ದರ್ಶನ್ ನಲ್ಕಂಡೆ (12), ರಶೀದ್ ಖಾನ್ (0) ವಿಕೆಟ್ ಕಳೆದುಕೊಂಡ ಗುಜರಾತ್ ಚೇಸಿಂಗ್‌ನಲ್ಲಿ ಎಡವಿತು. ರಾಹುಲ್ ತೆವಾಟಿಯಾ (30) ಸೋಲಿನ ಅಂತರ ತಗ್ಗಿಸಿದರು.

1. ಯಶ್ ಠಾಕೂರ್ ಹಾಲಿ ಆವೃತ್ತಿಯಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net