

ಚೆನ್ನೈ: ಶಿವಂ ದುಬೆ (51 ರನ್, 23 ಎಸೆತ, 2 ಬೌಂಡರಿ, 5 ಸಿಕ್ಸರ್) ಮತ್ತು ರಚಿನ್ ರವೀಂದ್ರ (46 ರನ್, 20 ಎಸೆತ, 6 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಬಲದಿಂದ ರನ್ಮಳೆ ಹರಿಸಿದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ತಂಡ ಐಪಿಎಲ್-17ರ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು 63 ರನ್ಗಳಿಂದ ಗೆಲುವು ದಾಖಲಿಸಿದೆ. ಸತತ 2ನೇ ಜಯದೊಂದಿಗೆ ಋತುರಾಜ್ ಗಾಯಕ್ವಾಡ್ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಜತೆಗೆ ಟೂರ್ನಿಯ ಆತಿಥೇಯ ತಂಡವೇ ಗೆಲ್ಲುತ್ತಿರುವ ದೃಷ್ಟಾಂತ ಸತತ 7ನೇ ಪಂದ್ಯಕ್ಕೂ ವಿಸ್ತರಿಸಿದೆ.
ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಸಿಎಸ್ಕೆ ತಂಡ 6 ವಿಕೆಟ್ಗೆ 206 ರನ್ ಕಲೆಹಾಕಿತು. ಪ್ರತಿಯಾಗಿ ಗುಜರಾತ್ ಟೈಟಾನ್ಸ್ ತಂಡ ಸಿಎಸ್ಕೆ ವೇಗಿಗಳ ದಾಳಿಗೆ ಕುಸಿದು 8 ವಿಕೆಟ್ಗೆ 143 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದರೊಂದಿಗೆ 2023ರ ಫೈನಲಿಸ್ಟ್ಗಳ ಮುಖಾಮುಖಿಯಲ್ಲಿ ಫಲಿತಾಂಶವೂ ಪುನರಾವರ್ತನೆಯಾಯಿತು.
ಗುಜರಾತ್ಗೆ ಬೃಹತ್ ಮೊತ್ತದ ಚೇಸಿಂಗ್ಗೆ ಬೇಕಾದ ಬಿರುಸಿನ ಆರಂಭ ಸಿಗಲಿಲ್ಲ. ಆರಂಭಿಕರಾದ ನಾಯಕ ಶುಭಮಾನ್ ಗಿಲ್ (8), ವೃದ್ಧಿಮಾನ್ ಸಾಹ (21) ಬೇಗನೆ ಔಟಾದರು. ನಂತರದಲ್ಲಿ ಸಾಯಿ ಸುದರ್ಶನ್ (37) ಹೋರಾಟ ತೋರಲು ಯತ್ನಿಸಿದರೂ, ಅವರಿಗೆ ಸಮರ್ಥ ಬೆಂಬಲ ಲಭಿಸಲಿಲ್ಲ. ವಿಜಯ್ ಶಂಕರ್ (12), ಡೇವಿಡ್ ಮಿಲ್ಲರ್ (21), ಅಜ್ಮತ್ಉಲ್ಲಾ ಒಮರ್ಜಾಯಿ (11) ನಿರ್ಗಮನದಿಂದ ಗುಜರಾತ್ ಚೇಸಿಂಗ್ ಬಲ ಕಳೆದುಕೊಂಡಿತು.