

ನವದೆಹಲಿ: ಇರಾನ್ ಆಲ್ರೌಂಡರ್ ಅಲಿರೇಜಾ ಮಿರ್ಜಾಯಿನ್ (18 ಅಂಕ) ಭರ್ಜರಿ ಆಟದ ಬಲದಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯಲ್ಲಿ ಮತ್ತೊಮ್ಮೆ ಹ್ಯಾಟ್ರಿಕ್ ಗೆಲುವಿನ ಸಂಭ್ರಮ ಕಂಡಿದೆ. ಬೆಂಗಾಲ್ ವಾರಿಯರ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಬುಲ್ಸ್ ತಂಡ 43-32 ಅಂಕಗಳಿಂದ ಗೆಲುವು ದಾಖಲಿಸಿತು. 14ನೇ ಪಂದ್ಯದಲ್ಲಿ 8ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ ಕನ್ನಡಿಗ ಬಿ.ಸಿ. ರಮೇಶ್ ಮಾರ್ಗದರ್ಶನದ ತಂಡ ಪ್ಲೇಆಫ್ ಅವಕಾಶ ವೃದ್ಧಿಸಿಕೊಂಡಿದೆ.
ತ್ಯಾಗರಾಜ ಸ್ಟೇಡಿಯಂಯಲ್ಲಿ ನಡೆದ ದಿನದ 2ನೇ ಪಂದ್ಯದಲ್ಲಿ ಬುಲ್ಸ್ ಮೊದಲಾರ್ಧದಲ್ಲಿ 22-15ರಿಂದ ಮುನ್ನಡೆ ಸಾಧಿಸಿತು. ನಂತರ ದ್ವೀತಿಯಾರ್ಧದಲ್ಲೂ ಪಂದ್ಯದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಲಿರೇಜಾಗೆ ಆಶಿಶ್ ಮಲಿಕ್ (7) ಮತ್ತು ಕನ್ನಡಿಗ ಗಣೇಶ್ ಹನಮಂತಗೋಳ್ (5) ಉತ್ತಮ ಬೆಂಬಲ ಒದಗಿಸಿದರು.
ಅಗ್ರಸ್ಥಾನಕ್ಕೇರಿದ ಪುಣೇರಿ: ಈಗಾಗಲೆ ಪ್ಲೇಆಫ್ ಪ್ರವೇಶ ಖಾತ್ರಿಪಡಿಸಿಕೊಂಡಿರುವ ತಂಡಗಳ ನಡುವಿನ ಜಿದ್ದಾಜಿದ್ದಿನ ಕಾದಾಟದಲ್ಲಿ ಪುಣೇರಿ ಪಲ್ಟಾನ್ ತಂಡ ದಬಾಂಗ್ ಡೆಲ್ಲಿ ವಿರುದ್ಧ ಟೈಬ್ರೇಕರ್ನಲ್ಲಿ 6-5 ಅಂಕಗಳಿಂದ ರೋಚಕ ಗೆಲುವು ದಾಖಲಿಸಿತು. 15ನೇ ಪಂದ್ಯದಲ್ಲಿ ಕಂಡ 12ನೇ ಜಯದೊಂದಿಗೆ ಪುಣೇರಿ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, 15ನೇ ಪಂದ್ಯದಲ್ಲಿ 3ನೇ ಸೋಲು ಕಂಡ ಡೆಲ್ಲಿ 2ನೇ ಸ್ಥಾನಕ್ಕಿಳಿಯಿತು. ಉಭಯ ತಂಡಗಳು ತಲಾ 24 ಅಂಕ ಹೊಂದಿವೆ. ಆದರೆ ಸ್ಕೋರ್ ವ್ಯತ್ಯಾಸದಲ್ಲಿ ಪುಣೇರಿ ಮೇಲುಗೈ ಸಾಧಿಸಿದೆ. ಪುಣೇರಿಗೆ ಇದು ಸತತ 6ನೇ ಗೆಲುವಾಗಿದೆ.
ತ್ಯಾಗರಾಜ ಸ್ಟೇಡಿಯಂಯಲ್ಲಿ ಭಾನುವಾರ ನಡೆದ ಪಂದ್ಯ 38-38 ಅಂಕಗಳಿಂದ ರೋಚಕ ಟೈಗೊಂಡಿತು. ಮೊದಲಾರ್ಧದಲ್ಲಿ ಡೆಲ್ಲಿ 21-20ರಿಂದ ಅಲ್ಪ ಮುನ್ನಡೆ ಸಾಧಿಸಿದರೆ, ದ್ವೀತಿಯಾರ್ಧದ ಕೊನೇ ನಿಮಿಷದಲ್ಲಿ ಪುಣೇರಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಪರ ಅಜಿಂಕ್ಯ ಪವಾರ್ ಗರಿಷ್ಠ 10 ಅಂಕ ಕಲೆಹಾಕಿದರೆ, ಪುಣೇರಿ ಪರ ಪಂಕಜ್ ಮೋಹಿತೆ (7), ನಾಯಕ ಅಸ್ಲಾಂ ಇನಾಮ್ದಾರ್ (6), ಆದಿತ್ಯ ಶಿಂಧೆ (5), ಮೋಹಿತ್ ಗೋಯತ್ (5) ಸಂಟಿತ ಹೋರಾಟ ಪ್ರದರ್ಶಿಸಿದರು.
ಡೆಲ್ಲಿ ಗ್ರೀನ್ ಜೆರ್ಸಿ: ದಬಾಂಗ್ ಡೆಲ್ಲಿ ತಂಡ ಪರಿಸರ ಜಾಗೃತಿಗಾಗಿ ಪುಣೇರಿ ವಿರುದ್ಧದ ಪಂದ್ಯವನ್ನು ಹಸಿರು ಬಣ್ಣದ ಜೆರ್ಸಿಯಲ್ಲಿ ಆಡಿತು.