ಮಹಿಳೆಯರ ಏಕದಿನ ವಿಶ್ವಕಪ್: ಅಲನಾ ಕಿಂಗ್ ದಾಳಿಗೆ ಕಂಗೆಟ್ಟ ದಕ್ಷಿಣ ಆಫ್ರಿಕಾ; ಆಸೀಸ್​ಗೆ ಅಗ್ರಸ್ಥಾನ ಭದ್ರ

web wwc aus
Published on

ಇಂದೋರ್​: ಲೆಗ್​ ಸ್ಪಿನ್ನರ್​ ಅಲನಾ ಕಿಂಗ್​ (18ಕ್ಕೆ 7) ಪ್ರದರ್ಶಿಸಿದ ಮಹಿಳೆಯರ ಏಕದಿನ ವಿಶ್ವಕಪ್​ ಇತಿಹಾಸದಲ್ಲೇ ಅತ್ಯುತ್ತಮವಾದ ಬೌಲಿಂಗ್​ ನಿರ್ವಹಣೆಯ ಬಲದಿಂದ ಹಾಲಿ ಚಾಂಪಿಯನ್​ ಆಸ್ಟ್ರೆಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್​ಗಳಿಂದ ಸುಲಭ ಗೆಲುವು ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಆಸ್ಟ್ರೆಲಿಯಾ, ಆತಿಥೇಯ ಭಾರತ ವಿರುದ್ಧದ ಸೆಮಿಫೈನಲ್​ ಹಣಾಹಣಿಗೆ ಸಜ್ಜಾಗಿದೆ.

ಹೋಳ್ಕರ್​ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ದಕ್ಷಿಣ ಆಫ್ರಿಕಾ 24 ಓವರ್​ಗಳಲ್ಲಿ ಕೇವಲ 97 ರನ್​ಗಳಿಗೆ ಆಲೌಟ್​ ಆಯಿತು. ಪ್ರತಿಯಾಗಿ ಆಸೀಸ್​ 16.5 ಓವರ್​ಗಳಲ್ಲೇ 3 ವಿಕೆಟ್​ಗೆ 98 ರನ್​ ಗಳಿಸಿ ಜಯಿಸಿತು.

ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ 69 ರನ್​ಗಳಿಗೆ ಕುಸಿದ ಬಳಿಕ ಸತತ 5 ಜಯದೊಂದಿಗೆ ಸೆಮೀಸ್​ ಸ್ಥಾನ ಖಾತ್ರಿಪಡಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ, ಮತ್ತೆ ಕುಸಿತ ಕಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಕೈಚೆಲ್ಲಿತು.

ಅಲನಾ ಕಿಂಗ್​ ಮಹಿಳೆಯರ ಏಕದಿನ ಕ್ರಿಕೆಟ್​ನಲ್ಲಿ 7 ವಿಕೆಟ್​ ಕಬಳಿಸಿದ 6ನೇ ಬೌಲರ್​ ಎನಿಸಿದರು. ಅವರು ವಿಶ್ವಕಪ್​ನಲ್ಲಿ ಈ ಸಾಧನೆ ಮಾಡಿದ ಮೊದಲಿಗರಾಗಿದ್ದಾರೆ. ನ್ಯೂಜಿಲೆಂಡ್​ನ ಜಾಕಿ ಲಾರ್ಡ್ಸ್​ 1982ರಲ್ಲಿ ಭಾರತದ ವಿರುದ್ಧ 10 ರನ್​ಗೆ 6 ವಿಕೆಟ್​ ಕಬಳಿಸಿದ್ದು ಹಿಂದಿನ ಶ್ರೇಷ್ಠ ನಿರ್ವಹಣೆ.

ದಕ್ಷಿಣ ಆಫ್ರಿಕಾ: 24 ಓವರ್​ಗಳಲ್ಲಿ 97 (ವೊಲ್ವಾರ್ಡ್​ 31, ಬ್ರಿಟ್ಸ್​ 6, ಲುಸ್​ 6, ಕಾಪ್​ 0, ಜ್ತಾ 29, ಡಿ ಕ್ಲರ್ಕ್​ 14, ಟೆಯಾನ್​ 0, ಅಲನಾ ಕಿಂಗ್​ 18ಕ್ಕೆ 7, ಸ್ಕಟ್​ 21ಕ್ಕೆ 1, ಗಾರ್ತ್​ 21ಕ್ಕೆ 1, ಗಾರ್ಡ್​ನರ್​ 19ಕ್ಕೆ 1). ಆಸ್ಟ್ರೆಲಿಯಾ: 16.5 ಓವರ್​ಗಳಲ್ಲಿ 3 ವಿಕೆಟ್​ಗೆ 98 (ವೋಲ್​ 38*, ಮೂನಿ 42, ಕಾಪ್​ 11ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net