

ಸೌಥಾಂಪ್ಟನ್: ಕೋವಿಡ್ನಿಂದಾಗಿ ಕ್ರಿಕೆಟಿಗರಿಗೆ ಕ್ವಾರಂಟೈನ್ ಸಾಮಾನ್ಯವಾಗಿದೆ. ಕಳೆದ ವರ್ಷ ಯುಎಇಯಲ್ಲಿ ನಡೆದ 13ನೇ ಐಪಿಎಲ್ನಿಂದ ಆರಂಭಗೊಂಡ ಕ್ವಾರಂಟೈನ್ ನಿಯಮ, ಆಟಗಾರರ ಪಾಲಿಗೆ ಸಾಮಾನ್ಯವಾಗಿದೆ. ಯಾವುದೇ ಸರಣಿ ಆರಂಭಕ್ಕೂ ಮುನ್ನವೇ ಕನಿಷ್ಠ ಇಂತಿಷ್ಟು ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಇದೀಗ ಮುಂದುವರಿದ ಭಾಗದಂತೆ ಇಂಗ್ಲೆಂಡ್ ಪ್ರವಾಸದಲ್ಲಿ ಆರಂಭಿಕ ಮೂರು ದಿನ ಭಾರತ ತಂಡಗಳಿಗೆ ಕಠಿಣ ಕ್ವಾರಂಟೈನ್ ನಿಯಮ ಜಾರಿಗೆ ತರಲಾಗಿದೆ. ಆಟಗಾರರು ಕ್ವಾರಂಟೈನ್ ಅವಧಿಯಲ್ಲಿ ಪರಸ್ಪರ ಭೇಟಿಯಾಗುವಂತಿಲ್ಲ. ಐಸೋಲೇಷನ್ ಅವಧಿಯನ್ನು ಕಠಿಣವಾಗಿ ಪಾಲನೆ ಮಾಡಲಾಗುತ್ತಿದೆ ಎಂದು ಭಾರತ ತಂಡದ ಸ್ಪಿನ್ನರ್ ಅಕ್ಷರ್ ಪಟೇಲ್ ತಿಳಿಸಿದ್ದಾರೆ.
ಕ್ವಾರಂಟೈನ್ ಅವಧಿ ಕುರಿತು ಅಕ್ಷರ್ ಪಟೇಲ್ ಮಾತನಾಡಿರುವ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯವೂ ಜೂನ್ 18 ರಿಂದ ಸೌಥಾಂಪ್ಟನ್ನಲ್ಲಿ ನಡೆಯಲಿದೆ. ಮತ್ತೊಂದೆಡೆ, ಎದುರಾಳಿ ನ್ಯೂಜಿಲೆಂಡ್ ಈಗಾಗಲೇ ಇಂಗ್ಲೆಂಡ್ನಲ್ಲಿದ್ದು, ಆತಿಥೇಯ ತಂಡದ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುತ್ತಿದೆ. ಇಂಗ್ಲೆಂಡ್ಗೆ ತೆರೆಳುವುದಕ್ಕೂ ಮುನ್ನ ಭಾರತ ತಂಡ ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್ಗೆ ಒಳಗಾಗಿತ್ತು. ಇಂಗ್ಲೆಂಡ್ ಪ್ರವಾಸದ ಕುರಿತು ವಿಮಾನದಲ್ಲಿ ಮಾತನಾಡಿರುವ ಅರ್ ಪಟೇಲ್, ಪ್ರವಾಸದಲ್ಲಿ ಎರಡು ಗಂಟೆಗಳ ಸಿನಿಮಾ ನೋಡಿದೆ, ಮತ್ತೆ ಆರು ಗಂಟೆ ಭರ್ಜರಿ ನಿದ್ದೆ ಮಾಡಿದೆ. ಮೂರು ದಿನಗಳ ಕಾಲ ಆಟಗಾರರು ಪರಸ್ಪರ ಮಾತನಾಡಬಾರದು ಎಂದು ಹೇಳಲಾಗಿದೆ. ಕಠಿಣ ಕ್ವಾರಂಟೈನ್ ಅವಧಿ ಇದಾಗಿದೆ ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.
ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಒಂದೇ ವಿಮಾನದಲ್ಲಿ ಇಂಗ್ಲೆಂಡ್ಗೆ ತೆರಳಿದ್ದವು. ಲಂಡನ್ಗೆ ಬಂದಿಳಿದ ಬಳೀಕ ಎರಡು ತಂಡಗಳು ಸೌಥಾಂಪ್ಟನ್ಗೆ ಎರಡು ಗಂಟೆಯ ಅವಧಿಯಲ್ಲಿ ಬಸ್ನಲ್ಲಿ ತೆರಳಿದವು. ಭಾರತ ಪುರುಷರ ತಂಡ ಡಬ್ಲ್ಯುಟಿಸಿ ಫೈನಲ್ ಪಂದ್ಯದ ಬಳಿಕ ಸೆಪ್ಟೆಂಬರ್ನಲ್ಲಿ ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಮತ್ತೊಂದೆಡೆ, ಮಹಿಳಾ ತಂಡ ಇಂಗ್ಲೆಂಡ್ ಎದುರು ಏಕೈಕ ಟೆಸ್ಟ್, ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಲಿವೆ.