ತಂದೆ ವಿರೋಧದ ನಡುವೆ ಕ್ರಿಕೆಟ್​ ಕನಸು ನನಸಾಗಿಸಿದ ಆಕಾಶ್​ ದೀಪ್!

akash deep web
Published on

ರಾಂಚಿ: ಮಗ ಸರ್ಕಾರಿ ನೌಕರ ಆಗಬೇಕೆಂಬ ಆಸೆ ಹೊಂದಿದ್ದ ತಂದೆ ರಾಮ್​ಜಿ ಸಿಂಗ್​, ಕ್ರಿಕೆಟಿಗನಾಗುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಆದರೂ, ತಾಯಿ ಲದುಮಾ ದೇವಿಯ ಪರೋಕ್ಷ ಬೆಂಬಲದೊಂದಿಗೆ ಕ್ರಿಕೆಟಿಗನಾಗುವ ಕನಸು ಕಂಡಿದ್ದರು ಬಿಹಾರದ ರೋಹ್ಟಸ್​ ಜಿಲ್ಲೆಯ ಬಡ್ಡಿ ಎಂಬ ಹಳ್ಳಿಯ ಆಕಾಶ್​ ದೀಪ್​. ಈ ನಡುವೆ, ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದ ತಂದೆ ನಿವೃತ್ತಿ ಹೊಂದಿದ ಬಳಿಕ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಇಡಿದರು. 5 ತಿಂಗಳ ಬಳಿಕ 2015ರ ಫೆಬ್ರವರಿಯಲ್ಲಿ ಅವರು ಮೃತಪಟ್ಟರು. ಬೆನ್ನಲ್ಲೇ ಅಣ್ಣ ಕೂಡ ಅನಾರೋಗ್ಯದಿಂದ ನಿಧನ ಹೊಂದಿದಾಗ ಕುಟುಂಬದ ಹೊಣೆ ಎಲ್ಲ ಆಕಾಶ್​ ಹೆಗಲೇರಿತು.

ಆಗ ಆಕಾಶ್​ ದೀಪ್​ 3 ವರ್ಷಗಳ ಕಾಲ ಕ್ರಿಕೆಟ್​ನಿಂದ ಬಹುತೇಕ ದೂರ ಉಳಿದರೂ, ಕ್ರಿಕೆಟಿಗನಾಗುವ ಕನಸು ಇನ್ನೂ ಜೀವಂತ ಉಳಿದಿತ್ತು. ಹೀಗಾಗಿ ಕೋಲ್ಕತಕ್ಕೆ ಹೋಗಿ ಸಂಬಂಧಿಯೊಬ್ಬರ ಜತೆ ನೆಲೆಸುವ ಮೂಲಕ ಕ್ರಿಕೆಟ್​ ಆಸೆಗೆ ಮರುಜೀವ ತುಂಬಲು ಯತ್ನಿಸಿದರು. ಅಲ್ಲಿ ಕ್ಲಬ್​ ಕ್ರಿಕೆಟ್​ ಅವಕಾಶ ಪಡೆದು ಬಳಿಕ ಬಂಗಾಳ ತಂಡ ಸೇರಿದರು. ಐಪಿಎಲ್​ನಲ್ಲೂ ಕೆಲ ತಂಡಗಳಿಗೆ ನೆಟ್​ ಬೌಲರ್​ ಆಗಿದ್ದರು. 2022ರಲ್ಲಿ ಆರ್​ಸಿಬಿ ತಂಡ ಸೇರಿದ ಬಳಿಕ ಅವರ ಆರ್ಥಿಕ ಸ್ಥಿತಿಯೂ ಸುಧಾರಿಸಲಾರಂಭಿಸಿತು. ಈಗ ಅವರು ತನ್ನ ಹಳ್ಳಿಯಲ್ಲಿ 3 ಮಹಡಿಯ ಮನೆಯನ್ನೂ ನಿರ್ಮಿಸುತ್ತಿದ್ದಾರೆ.

ಇದೇ ವೇಳೆ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದರೊಂದಿಗೆ ಟೀಮ್​ ಇಂಡಿಯಾ ಪರ ಆಡುವ ಅವರ ಕನಸು ಕೂಡ ನನಸಾಗಿದೆ. ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ 4ನೇ ಪಂದ್ಯಕ್ಕೆ ಮುನ್ನ ಕೋಚ್​ ರಾಹುಲ್​ ದ್ರಾವಿಡ್​ರಿಂದ ಆಕಾಶ್​ ಟೆಸ್ಟ್​ ಕ್ಯಾಪ್​ ಪಡೆದ ಕ್ಷಣಕ್ಕೆ ತಾಯಿ ಮತ್ತು ಕುಟುಂಬಸ್ಥರು ಕೂಡ ಸಾಕ್ಷಿಯಾಗಿದ್ದರು.

*ನಾನು ಈ ದಿನವನ್ನು ತಂದೆಗೆ ಅರ್ಪಿಸಲು ಬಯಸುತ್ತೇನೆ. ನಾನು ಜೀವನದಲ್ಲಿ ಏನಾದರು ಸಾಧನೆ ಮಾಡಬೇಕೆಂಬುದು ಅವರ ಬಯಕೆಯಾಗಿತ್ತು. ನಾನೀಗ ಭಾರತ ಪರ ಆಡುವುದನ್ನು ಅವರು ನೋಡಲಾಗಲಿಲ್ಲ. | ಆಕಾಶ್​ ದೀಪ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net