ಫಿಟ್​ ಆಗಿದ್ರೆ ಇಷ್ಟೊತ್ತಿಗೆ ತಂಡದಲ್ಲಿ ಇರ್ತಿದ್ರು! ಶಮಿ ಮಾತಿಗೆ ಅಜಿತ್ ಅಗರ್ಕರ್​ ಖಡಕ್ ತಿರುಗೇಟು | Ajit Agarkar

ವಿಜಯವಾಣಿ (72)
Published on

ನವದೆಹಲಿ: ಇದೇ ಅ.19ರಿಂದ ಆರಂಭಗೊಳ್ಳಲಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಈಗಾಗಲೇ ಟೀಮ್ ಇಂಡಿಯಾ ಸನ್ನದ್ಧಗೊಂಡಿದೆ (Ajit Agarkar)​. ಈಗಾಗಲೇ ಎರಡು ಸರಣಿಗೂ ಪ್ರತ್ಯೇಕ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ಸ್ಟಾರ್​ ವೇಗಿ ಮೊಹಮ್ಮದ್​ ಶಮಿ ಅವರನ್ನು ಎರಡಕ್ಕೂ ಪರಿಗಣಿಸದೆ ಹೋಗಿದ್ದು ಸದ್ಯ ಹಲವರ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ್ದ ಶಮಿ, ಫಿಟ್ನೆಸ್​ ಇದ್ದರೂ ಆಯ್ಕೆಯಿಂದ ಹೊರಗಿಟ್ಟರು ಎಂದಿದ್ದರು. ಈ ಮಾತಿಗೆ ಇದೀಗ ಅಜಿತ್ ಅಗರ್ಕರ್ ಕಿಡಿಕಾರಿದ್ದಾರೆ.

ಶಮಿ ದೂರಿದ್ದೇನು?

ಈ ಹಿಂದೆ ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್​ ಸರಣಿಯಿಂದ ಶಮಿಯನ್ನು ಕೈಬಿಟ್ಟಿದ್ದ ಅಜಿತ್ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿ, ಆಸೀಸ್​ ವಿರುದ್ಧದ ಸರಣಿಯಿಂದಲೂ ಕೈಬಿಟ್ಟಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಶಮಿ, “ನನ್ನ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಮುಖ್ಯವಾಗಿ, ಆಯ್ಕೆ ಆಗುವುದು, ಬಿಡುವುದು ಇದ್ಯಾವುದು ನಮ್ಮ ಕೈಯಲ್ಲಿಲ್ಲ. ಎಲ್ಲವೂ ಆಯ್ಕೆ ಸಮಿತಿಯ ನಿರ್ಧಾರಗಳಿಂದಲೇ ನಡೆಯುವುದು. ಕೋಚ್​, ಕ್ಯಾಪ್ಟನ್​ ಮತ್ತು ಸಮಿತಿಯ ಮುಖ್ಯಸ್ಥರು ತೆಗೆದುಕೊಳ್ಳುವ ನಿರ್ಣಯಗಳ ಮೇಲೆ ಅವಲಂಬಿತ ಎಂದಿದ್ದರು.

"ನಾನು ಆ ತಂಡದಲ್ಲಿ ಇರಬೇಕು ಎಂದು ಅವರು ಬಯಸಿದರೆ, ಖಂಡಿತ ಆಯ್ಕೆ ಆಗ್ತೀನಿ. ಇಲ್ಲ, ನಾನಿನ್ನು ಕೆಲವು ವರ್ಷಗಳು ಕಾಯಬೇಕು ಎಂದರೆ, ಹೀಗೆ ಇರಬೇಕು ಅಷ್ಟೇ. ಪ್ರಸ್ತುತ, ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೀನಿ. ಮೈದಾನದಲ್ಲಿ ಪ್ರ್ಯಾಕ್ಟಿಸ್​ ಕೂಡ ಮಾಡ್ತಿದ್ದೀನಿ. ದುಲೀಪ್ ಟ್ರೋಫಿ ಆಡಿದೆ. 35 ಓವರ್​ ಮಾಡಿದೆ. ಅಲ್ಲಿ ಯಾವುದೇ ಫಿಟ್ನೆಸ್​ ಸಮಸ್ಯೆ ನನ್ನನ್ನು ಕಾಡಲಿಲ್ಲ. ನನ್ನ ಓಟ ಚೆನ್ನಾಗಿಯೇ ಇದೆ” ಎಂದು ಹೇಳಿದ್ದರು.

ಅಜಿತ್​ ಅಗರ್ಕರ್​ ವಾದವೇನು?

ಇತ್ತೀಚೆಗೆ ಮೊಹಮ್ಮದ್​ ಶಮಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್​ ಅಗರ್ಕರ್​, "ಫಿಟ್​ ಆಗಿದಿದ್ರೆ ಖಂಡಿತ ಅವರು ತಂಡದಲ್ಲಿ ಇರ್ತಿದ್ದರು. ಈ ವಿಷಯವನ್ನು ಖುದ್ದಾಗಿ ನನ್ನೊಂದಿಗೆಯೇ ಮಾತನಾಡಿದ್ದರೆ, ನಾನು ಶಮಿ ಜತೆಗೆ ದೂರವಾಣಿ ಕರೆ ಮಾಡಿ ಮಾತಾಡ್ತಿದ್ದೆ. ಅವರು ಸೋಷಿಯಲ್ ಮೀಡಿಯಾದಲ್ಲಿ ಏನು ಹೇಳಿದ್ದಾರೆ ಎಂಬುದರ ಸ್ಪಷ್ಟ ಮಾಹಿತಿ ನನಗಿಲ್ಲ. ಸಾಮಾನ್ಯವಾಗಿ, ಆಟಗಾರರಿಗೆ ನನ್ನ ಫೋನ್ ಎಂದಿಗೂ ಆನ್​ನಲ್ಲೇ ಇರುತ್ತೆ. ಈ ಹಿಂದೆ ಶಮಿಯೊಟ್ಟಿಗೆ ಸಾಕಷ್ಟು ಮಾತುಕತೆ ಮಾಡಿದ್ದೀನಿ. ಸಂದೇಶಗಳನ್ನು ಕಳಿಸಿದ್ದೀನಿ. ಅದು ಏನೆಲ್ಲ ಅಂತ ಇಲ್ಲಿ ಹೇಳುವ ಮೂಲಕ ಒಂದು ಹೆಡ್​ಲೈನ್ ಕೊಡಲು ನಾನು ಸಿದ್ಧವಿಲ್ಲ" ಎಂದರು.

"ಇಂಗ್ಲೆಂಡ್​ ಸರಣಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದೆವು. ಆದರೆ, ಅವರು ಫಿಟ್​ ಆಗಿರಲಿಲ್ಲ. ದೇಶಿಯ ಕ್ರಿಕೆಟ್ ಈಗ ಶುರುವಾಗಿದೆ. ಅವರೇನಾದರೂ ಫಿಟ್​ ಆಗಿದ್ರೆ ಮುಂದೆ ನೋಡೋಣ. ರಣಜಿ ಪಂದ್ಯಗಳಲ್ಲಿ ಅವರ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಗಮನಿಸುತ್ತೇನೆ. ಶಮಿ ಅಂತ ಅತ್ಯುತ್ತಮ ವೇಗಿಯನ್ನು ಹೇಗೆ ಕೈಬಿಡಲು ಸಾಧ್ಯ. ನಾನು ಅವರನ್ನು ತಂಡಕ್ಕೆ ಕರೆದುಕೊಳ್ಳಲು ಎದುರುನೋಡುತ್ತಿದ್ದೇವೆ. ಆದ್ರೆ, ಅವರ ಫಿಟ್ನೆಸ್​ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಇದು ಬದಲಾದರೆ, ಖಂಡಿತ ಕಥೆ ಬೇರೆ ಇರಲಿದೆ. ನನ್ನ ಪ್ರಕಾರ, ಇಂಗ್ಲೆಂಡ್​ ಪ್ರವಾಸದ ಸಮಯದಲ್ಲಿ ಅವರು ಫಿಟ್ನೆಸ್​ ಕಾಪಾಡಿಕೊಂಡಿರಲಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net