ಐಪಿಎಲ್ ಹರಾಜಿನ ಮೊದಲ ಸುತ್ತಿನಲ್ಲಿ ಸೇಲಾಗದೆ ಉಳಿದಿದ್ದ ಆಟಗಾರನಿಗೆ ಕೆಕೆಆರ್ ನಾಯಕ ಪಟ್ಟ!: ದುಬಾರಿ ಆಟಗಾರ ಉಪನಾಯಕ

New Project (1)
Published on

ನವದೆಹಲಿ: ಮುಂಬರುವ ಐಪಿಎಲ್ 18ನೇ ಆವೃತ್ತಿಗೆ ಹಾಲಿ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ತಂಡದ ನೂತನ ನಾಯಕನಾಗಿ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ನೇಮಕಗೊಂಡಿದ್ದಾರೆ. ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಉಪನಾಯಕನಾಗಿ ಆಯ್ಕೆಯಾಗಿದ್ದು, ್ರಾಂಚೈಸಿ ಸೋಮವಾರ ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಉಳಿದೆಲ್ಲ ತಂಡಗಳ ನಾಯಕರ ಹೆಸರು ಬಹಿರಂಗಗೊಂಡಿದೆ.

ಕಳೆದ ಆವೃತ್ತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್‌ರಿಂದ ತೆರವಾಗಿರುವ ಸ್ಥಾನವನ್ನು 36 ವರ್ಷದ ರಹಾನೆ ತುಂಬಲಿದ್ದಾರೆ. 2024ರ ನವೆಂಬರ್‌ನಲ್ಲಿ ನಡೆದ ಮೆಗಾ ಹರಾಜಿನ ಮೊದಲ ಸುತ್ತಿನಲ್ಲಿ ಸೇಲಾಗದೆ ಉಳಿದಿದ್ದ ರಹಾನೆ, ಕೊನೇ ಸುತ್ತಿನಲ್ಲಿ ಮೂಲಬೆಲೆ ₹1.50 ಕೋಟಿಗೆ ಕೆಕೆಆರ್ ತಂಡ ಸೇರಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ರಹಾನೆ ನಾಯಕತ್ವದ ಯಶಸ್ಸು, ಅನುಭವಕ್ಕೆ ಮಣೆ ಹಾಕಿ ಕೆಕೆಆರ್ ತಂಡದ ಸಾರಥ್ಯ ನೀಡಲಾಗಿದೆ. 2022ರಲ್ಲಿ ಕೆಕೆಆರ್ ತಂಡದಲ್ಲಿ ಆಡಿದ್ದ ರಹಾನೆ ಅವರನ್ನು ಕಳಪೆ ಾರ್ಮ್‌ನಿಂದಾಗಿ ಕೈಬಿಡಲಾಗಿತ್ತು. ನಂತರದ ಎರಡು ಸೀಸನ್‌ನಲ್ಲಿ ಸಿಎಸ್‌ಕೆ ಅಗ್ರ ಕ್ರಮಾಂಕಕ್ಕೆ ಬಲ ತುಂಬಿದ್ದರು. 2008ರಿಂದಲೂ ಪ್ರತಿಯೊಂದು ಐಪಿಎಲ್ ಸೀಸನ್ ಆಡಿರುವ ರಹಾನೆಗೆ 2018-19ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ ಅನುಭವವಿದೆ.

ಕೆಕೆಆರ್ ತಂಡದೊಂದಿಗೆ 2ನೇ ಬಾರಿ ಒಗ್ಗೂಡಿರುವ ರಹಾನೆ, 2023-24ರ ರಣಜಿ ಟ್ರೋಫಿ ಹಾಗೂ ಹಾಲಿ ಋತುವಿನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಜತೆಗೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರರ್ ಸಹ ಆಗಿದ್ದಾರೆ. 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಜಯಿಸಿದಾಗ ಕೊಹ್ಲಿ ಗೈರಿನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ರಹಾನೆ ಕೆಕೆಆರ್ ತಂಡವನ್ನು ಮುನ್ನಡೆಸಲಿರುವ 9ನೇ ಆಟಗಾರ ಆಗಿದ್ದಾರೆ.

ಟೂರ್ನಿಯ ಇತಿಹಾಸದಲ್ಲಿ 4ನೇ ದುಬಾರಿ ಆಟಗಾರ ಎನಿಸಿರುವ ಮಧ್ಯಪ್ರದೇಶದ ವೆಂಕಟೇಶ್ ಅಯ್ಯರ್ ಉಪನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಖರೀದಿಗೆ ್ರಾಂಚೈಸಿ ₹23.75 ಕೋಟಿ ವ್ಯಯಿಸಿತ್ತು. ವೆಂಕಿ 2021ರಿಂದಲೂ ಕೆಕೆಆರ್ ತಂಡದ ಭಾಗವಾಗಿದ್ದಾರೆ. ಮಾ.22ರ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್-ಆರ್‌ಸಿಬಿ ತಂಡಗಳು ಎದುರಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net