ಭಾರತ ದುಬೈನಲ್ಲಿ ಟ್ರೋಫಿ ಗೆಲ್ಲಬಾರದಿತ್ತು; ಟೀಮ್ ಇಂಡಿಯಾ ಗೆಲುವಿನ ಬೆನ್ನಲ್ಲೇ ಅಜಯ್​​ ಜಡೇಜಾ ಬಿಚ್ಚುನುಡಿ | Ajay Jadeja

ವಿಜಯವಾಣಿ - 2025-03-10T155719.523
Published on

Ajay Jadeja: ದುಬೈನಲ್ಲಿ ಭಾನುವಾರ (ಮಾರ್ಚ್​ 09) ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳಿಂದ ಜಯಗಳಿಸಿದ ಭಾರತ ತಂಡ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ರೋಹಿತ್ ಶರ್ಮ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದ ಭಾರತ, ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿತು. ಭಾರತೀಯರು ಸೇರಿದಂತೆ ಇತರೆ ದೇಶದ ದಿಗ್ಗಜರು ರೋಹಿತ್ ಶರ್ಮ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಅಭಿನಂದನೆ ತಿಳಿಸಿದ ಅಜಯ್​ ಜಡೇಜಾ, ಭಾರತ ದುಬೈನಲ್ಲಿ ಟ್ರೋಫಿ ಎತ್ತಬಾರದಿತ್ತು ಎಂದಿದ್ದಾರೆ.

4 ವಿಕೆಟ್​ಗಳ ಅಂತರದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ, ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೋಟ್ಯಂತರ ಅಭಿಮಾನಿಗಳ ಎದುರು ಚಾಂಪಿಯನ್ಸ್​ ಟ್ರೋಫಿಯನ್ನು ಎತ್ತಿಹಿಡಿಯಿತು. ಈ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಟೀಮ್ ಇಂಡಿಯಾ ಮಾಜಿ ಹಿರಿಯ ಆಟಗಾರ ಅಜಯ್ ಜಡೇಜಾ, "ರೋಹಿತ್ ಶರ್ಮ ಪಡೆ ಗೆದ್ದ ಖುಷಿ ಹೇಳತೀರದು. ಆದರೆ, ದುಬೈನಲ್ಲಿ ಟ್ರೋಫಿ ಎತ್ತಿಹಿಡಿಯುವ ಬದಲಿಗೆ ಪಾಕಿಸ್ತಾನದ ನೆಲದಲ್ಲಿಯೇ ಗೆದ್ದಿದ್ದರೆ ಅದಕ್ಕಿಂತ ಖುಷಿ ಮತ್ತೊಂದಿರಲಿಲ್ಲ" ಎಂದು ಹೇಳಿದ್ದಾರೆ.

"ಲಾಹೋರ್​ನಲ್ಲಿ ಟೀಮ್ ಇಂಡಿಯಾ ತನ್ನ ಚಾಂಪಿಯನ್ಸ್​ಟ್ರೋಫಿಯನ್ನು ಎತ್ತಿ ಹಿಡಿಯಬೇಕಿತ್ತು. ಕಾರಣ, ಪಾಕಿಸ್ತಾನದ ಅಪಾರ ಅಭಿಮಾನಿಗಳಿಂದ ಭಾರತ ತಂಡಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿತ್ತು. ಪಾಕ್​ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಟೇಡಿಯಂ ಸೇರುವ ಮೂಲಕ ಉತ್ತಮ ಬೆಂಬಲವನ್ನು ತೋರುತ್ತಿದ್ದರು. ತಮ್ಮ ತಂಡ ನಿರೀಕ್ಷೆಗೆ ತಕ್ಕಂತೆ ಆಡದೆ, ಉತ್ತಮ ಪ್ರದರ್ಶನ ನೀಡದಿದ್ದರೂ, ಭಾರತಕ್ಕೆ ಪ್ರೋತ್ಸಾಹ ಕೊಡುತ್ತಿದ್ದರು" ಎಂದು ಜಡೇಜಾ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net