ಜೂನ್ 4ರಿಂದ 8ರವರೆಗೆ ಅಹಮದಾಬಾದ್ನಲ್ಲಿ ಚೊಚ್ಚಲ ಆವೃತ್ತಿಯ ಯೋಗಾಸನ ವಿಶ್ವ ಚಾಂಪಿಯನ್ ಆಯೋಜಿಸಲು ಸಿದ್ಧತೆ ಪೂರ್ಣಗೊಂಡಿರುವ ಸಮಯದಲ್ಲಿ ಮಾಂಡವೀಯ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಯೋಗಾಸನ ವಿಶ್ವ ಚಾಂಪಿಯನ್ಷಿಪ್ನಲ್ಲಿ 60 ದೇಶಗಳಿಂದ 529 ಯೋಗಪಟುಗಳು ಭಾಗವಹಿಸಲಿದ್ದಾರೆ. ಈ ಪೈಕಿ 114 ಸ್ಪರ್ಧಿಗಳು ಭಾರತೀಯರಾಗಿದ್ದಾರೆ. ಆಯ್ಕೆ ಟ್ರಯಲ್ಸ್ ಮೂಲಕ ಈ ಸ್ಪರ್ಧಿಗಳನ್ನು ಆರಿಸಲಾಗಿದ್ದು, ಸದ್ಯ ಅವರೆಲ್ಲರೂ ಅಹಮದಾಬಾದ್ನಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.
"2030ರಲ್ಲಿ ಅಹಮದಾಬಾದ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ ವೇಳೆ ಯೋಗಾಸನ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಾಗಿರಲಿದೆ. 2036ರ ಒಲಿಂಪಿಕ್ಸ್ ಆತಿಥ್ಯ ಸಿಕ್ಕರೆ ಆಗ ನಮ್ಮ ಕ್ರೀಡೆಯೂ ಅದರಲ್ಲಿ ಇರಲಿದೆ. ಆ ವೇಳೆಗೆ ಯೋಗಾಸನ ಒಲಿಂಪಿಕ್ಸ್ ಕ್ರೀಡೆಯಾಗಿರಬೇಕೆಂದು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಯೋಗಾಸನ ಒಕ್ಕೂಟ (ಯೋಗಾಸನ ಭಾರತ್) ಪ್ರಯತ್ನಿಸುತ್ತಿದೆ' ಎಂದು ಮಾಂಡವೀಯ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರೀಡಾ ಒಕ್ಕೂಟವನ್ನು ರಚಿಸಲು 75 ದೇಶಗಳ ಸಹಿ ಅಗತ್ಯವಿದೆ. ಇದು ದೊರೆತ ಬಳಿಕ ನಾವು, ಯೋಗಾಸನವನ್ನು ಒಲಿಂಪಿಕ್ಸ್ಗೆ ಸೇರಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಮನವಿ ಸಲ್ಲಿಸಲಿದ್ದೇವೆ. ಯೋಗಾಸನ 2032ರ ಒಲಿಂಪಿಕ್ಸ್ನಲ್ಲಿ ಪ್ರದರ್ಶನ ಕ್ರೀಡೆ ಮತ್ತು 2036ರ ಒಲಿಂಪಿಕ್ಸ್ನಲ್ಲಿ ಪದಕ ಸ್ಪರ್ಧೆಯಾಗಿರಬೇಕು ಎಂಬುದು ನಮ್ಮ ಧ್ಯೇಯವಾಗಿದೆ. 2036ರ ಒಲಿಂಪಿಕ್ಸ್ ಭಾರತ ಅಥವಾ ಬೇರೆ ಎಲ್ಲೇ ನಡೆದರೂ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದು ವಿವರಿಸಿದ್ದಾರೆ.
ಯೋಗಾಸನ ವಿಶ್ವ ಚಾಂಪಿಯನ್ಷಿಪ್ನಲ್ಲಿ 12 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, 10ರಿಂದ 55ನೇ ವಯಸ್ಸಿನವರೆಗೆ ಪುರುಷ-ಮಹಿಳೆಯರಲ್ಲಿ 6 ವಯೋಮಿತಿ ವಿಭಾಗಗಳು ಇರಲಿವೆ. ಏಷ್ಯಾ ವಲಯದಿಂದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ದೇಶಗಳು ಗೈರಾಗಲಿವೆ. ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದಾಗಿ ಇತರ ಕೆಲ ದೇಶಗಳು ಕೂಟಕ್ಕೆ ಗೈರಾಗುತ್ತಿವೆ.