

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೊಸೈಟಿ ಆಗಿಯೇ ಮುಂದುವರಿಯಬೇಕೆಂದು ಭಾನುವಾರ ನಡೆದ 93ನೇ ವಾರ್ಷಿಕ ಮಹಾಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ. ಜತೆಗೆ ಐಪಿಎಲ್ ಆಡಳಿತ ಮಂಡಳಿಗೆ ಹಾಲಿ ಚೇರ್ಮನ್ ಅರುಣ್ ಧುಮಾಲ್ ಹಾಗೂ ಜಗಮೋಹನ್ ದಾಲ್ಮಿಯಾ ಪುತ್ರ ಆವಿಷೇಕ್ ದಾಲ್ಮಿಯಾ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಬಿಸಿಸಿಐ ಯಾವುದೇ ಒಂದು ಲಾಭದಾಯಕ ಕಂಪನಿಯಾಗಲು ಬಯಸುವುದಿಲ್ಲ. ಹೊರಗಿನವರ ಹೂಡಿಕೆಗೆ ಅವಕಾಶ ಕಲ್ಪಿಸಿದರೆ ತನ್ನ ಸ್ವಾಯತ್ತತೆ ಮತ್ತು ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಕೇವಲ ಸೊಸೈಟಿ ಆಗಿ ಮುಂದುವರಿಯುವ ನಿರ್ಣಯವನ್ನು ಸಭೆಯಲ್ಲಿ ಅವಿಷೇಕ್ ದಾಲ್ಮಿಯಾ ಪ್ರಸ್ತಾಪಿಸಿದರು. ವಾರ್ಷಿಕ ಸಭೆಯ ಪ್ರಮುಖ ಅಜೆಂಡಾ ಆಗಿರದಿದ್ದರೂ ಈ ನಿರ್ಣಯವನ್ನು ಒಮ್ಮತದಿಂದ ಅಂಗೀಕರಿಸಲಾಗಿದೆ.
ಬಿಸಿಸಿಐನ ಸೊಸೈಟಿ ಸ್ಥಾನಮಾನ ಜತೆಗೆ ಐಪಿಎಲ್ ಟೂರ್ನಿಯನ್ನು ಒಂದು ಕಂಪನಿಯಾಗಿ ಪರಿವರ್ತಿಸಬಾರದು ಎಂಬುದು ಈ ನಿರ್ಣಯದ ಪ್ರಮುಖ ಅಂಶವಾಗಿದೆ. 1928ರ ಡಿಸೆಂಬರ್ 1ರಂದು ಬಿಸಿಸಿಐ ಸೊಸೈಟಿಯಾಗಿ ಚೆನ್ನೈನಲ್ಲಿ (ಆಗಿನ ಮದ್ರಾಸ್) ತನ್ನ ನೋಂದಣಿ ಮಾಡಿಕೊಂಡಿತ್ತು. ಬಿಸಿಸಿಐ ತನ್ನ ಷೇರುಗಳನ್ನು ಮಾರಾಟ ಅಥವಾ ಖರೀದಿಸುವ ಪ್ರಸ್ತಾವನೆ ಜತೆಗೆ ಬೇರೆಯವರಿಂದ ಹೂಡಿಕೆ ಅವಕಾಶ ಕಲ್ಪಿಸಲಿದೆ ಎಂಬ ವರದಿಗಳ ಹಿನ್ನೆಲೆ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಎಜಿಎಂನ ಪ್ರಮುಖ ಅಜೆಂಡಾ ಎನಿಸಿದ್ದ, ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರಿಂದ ತೆರವಾಗುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ (ಐಸಿಸಿ) ಭಾರತದ ಪ್ರತಿನಿಧಿ ಆಯ್ಕೆ ಪ್ರಕ್ರಿಯೆ ವಿಳಂಬಗೊಂಡಿದೆ. ಐಸಿಸಿ ಚೇರ್ಮನ್ ಆಗಿ ಜಯ್ ಷಾ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುವವರೆಗೂ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದು, ಐಸಿಸಿಗೆ ಭಾರತದ ಪ್ರತಿನಿಧಿಯೂ ಅವರೇ ಆಗಿರುತ್ತಾರೆ. ಹೈದರಾಬಾದ್‌ನ ಮಾಜಿ ಕ್ರಿಕೆಟಿಗ ವಿ. ಚಾಮುಂಡೇಶ್ವರ್‌ನಾಥ್ ಭಾರತೀಯ ಕ್ರಿಕೆಟಿಗರ ಅಸೋಸಿಯೇಷನ್‌ನಿಂದ ಐಪಿಎಲ್ ಆಡಳಿತ ಮಂಡಳಿಗೆ ನಾಮನಿರ್ದೇಶನಗೊಂಡಿದ್ದಾರೆ.
ಉಳಿದಂತೆ 2025-27ರ ವರೆಗಿನ ಐಪಿಎಲ್ ಟೂರ್ನಿಯ ಆಟಗಾರರ ರಿಟೇನ್ ನಿಯಮಾವಳಿ ಹಾಗೂ 2024-25ರ ವರ್ಷದ ಆರ್ಥಿಕ ಬಜೆಟ್ ಅನ್ನು ಸಭೆಯಲ್ಲಿ ಪ್ರಸ್ತಾಪಿಸಿ ಒಪ್ಪಿಗೆ ಪಡೆಯಲಾಯಿತು. ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾಗೆ ಮುಂಬೈನಲ್ಲಿ ಅದ್ದೂರಿ ಸ್ವಾಗತದ ಜತೆಗೆ ಪರೇಡ್ ಆಯೋಜಿಸುವ ಅವಕಾಶ ನೀಡಿದ್ದಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್, ಬಿಸಿಸಿಐಗೆ ಕೃತಜ್ಞತೆ ಸಲ್ಲಿಸಿತು.
ದುಲೀಪ್ ಟ್ರೋಫಿ ಮತ್ತೆ ವಲಯವಾರು ಟೂರ್ನಿ: ಪ್ರತಿಷ್ಠಿತ ದುಲೀಪ್ ಟ್ರೋಫಿ ಟೂರ್ನಿ ಮುಂದಿನ ವರ್ಷದ ದೇಶೀಯ ಋತುವಿನಲ್ಲಿ ವಲಯವಾರು ಮಾದರಿಗೆ ಮರಳಲಿದೆ ಎನ್ನಲಾಗಿದೆ. ಹಾಲಿ ಋತುವಿನಲ್ಲಿ ಪರಿಚಯಿಸಲಾದ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯಿಂದ ಆಯ್ಕೆಗೊಂಡ ಆಟಗಾರರ ನಾಲ್ಕು ತಂಡಗಳ ರೌಂಡ್ ರಾಬಿನ್ ಮಾದರಿಯ ಟೂರ್ನಿಯಿಂದ ರಾಜ್ಯ ಕ್ರಿಕೆಟ್ ಸಂಸ್ಥೆಗಳು ತೃಪ್ತಿಹೊಂದಿಲ್ಲ.
ಭಾನುವಾರ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಭಾರತ ಎ,ಬಿ,ಸಿ ಹಾಗೂ ಡಿ ಸಹಿತ 4 ತಂಡಗಳ ಟೂರ್ನಿಗೆ ವಿರೋಧ ವ್ಯಕ್ತಪಡಿಸಿವೆ. ಜತೆಗೆ ಈ ಬಾರಿಯ ಟೂರ್ನಿಯಲ್ಲಿ ಅರ್ಹ ಆಟಗಾರರಿಗೆ ಸೂಕ್ತ ಅವಕಾಶ ದೊರೆತಿಲ್ಲ ಎಂಬುದನ್ನು ರಾಜ್ಯ ಸಂಸ್ಥೆಗಳು ಬಿಸಿಸಿಐಗೆ ಮನವರಿಕೆ ಮಾಡಿದೆ. ಸಾಂಪ್ರದಾಯಿಕವಾಗಿ ನಡೆಯಲಿರುವ ಟೂರ್ನಿ ವಲಯವಾರು ಆಟಗಾರರಿಗೆ ಸಮಾನ ಅವಕಾಶ ಕಲ್ಪಿಸಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2024-25ರ ಆವೃತ್ತಿಗೂ ಮುನ್ನ ಕೇಂದ್ರ, ಪಶ್ಚಿಮ, ಪೂರ್ವ, ದಕ್ಷಿಣ, ಈಶಾನ್ಯ ಹಾಗೂ ಉತ್ತರ ವಲಯ ಸೇರಿ ಒಟ್ಟು ಆರು ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದವು.
ಈ ಬಾರಿಯ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ಕೆಎಲ್ ರಾಹುಲ್, ಶುಭಮಾನ್ ಗಿಲ್, ಸೂರ್ಯಕುಮಾರ್ ಯಾದವ್ ಸೇರಿ ಇತರರು ಆಡಿದ್ದರು.