ಯುವ ಆಟಗಾರರಿಗೆ ಬಿಸಿಸಿಐ ಶಾಕ್... ಇನ್ಮುಂದೆ ಐಪಿಎಲ್ ಪ್ರವೇಶ ಅಷ್ಟು ಸುಲಭವಲ್ಲ, ಈ ನಿಯಮ ಕಡ್ಡಾಯ! BCCI

BCCI
Published on

BCCI : ಇಂಡಿಯನ್​ ಪ್ರೀಮಿಯರ್​ ಲೀಗ್​ ಮೂಲಕ ಅನೇಕ ಯುವ ಆಟಗಾರರು ಮುನ್ನೆಲೆಗೆ ಬಂದಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ, 14 ವರ್ಷದ ವೈಭವ್ ಸೂರ್ಯವಂಶಿ. ಐಪಿಎಲ್ 2025ರ ಸೀಸನ್​ನಲ್ಲಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ಈ ಯುವ ಆಟಗಾರನನ್ನು ರಾಜಸ್ಥಾನ ರಾಯಲ್ಸ್ ತಂಡ 1.1 ಕೋಟಿ ರೂ.ಗೆ ಖರೀದಿಸಿದೆ.

ಬಿಹಾರದಲ್ಲಿ ಜನಿಸಿದ ಸೂರ್ಯವಂಶಿ ಚೊಚ್ಚಲ ಐಪಿಎಲ್​ನಲ್ಲೇ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿ, ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡು, ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದರು. ವಿಶೇಷವಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್​, ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಸಹ ಬರೆದರು.

ಅಂದಹಾಗೆ, ವೈಭವ್​ ಅವರ ಆಟವನ್ನು ನೋಡಿದ ಬಳಿಕ ಅನೇಕ ಹುಡುಗರು ತಾವು ಕೂಡ ಐಪಿಎಲ್‌ನಲ್ಲಿ ತಮ್ಮದೇಯಾದ ಛಾಪು ಮೂಡಿಸಬೇಕೆಂಬ ಆಸೆ ಹೊತ್ತುಕೊಂಡಿದ್ದಾರೆ. ಐಪಿಎಲ್​ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಯುವ ಕ್ರಿಕೆಟಿಗರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಘಾತ ನೀಡಿದೆ. ಇನ್ನು ಮುಂದೆ ಐಪಿಎಲ್​ನಲ್ಲಿ ಆಡಬೇಕಾದರೆ ಒಂದು ನಿಯಮವನ್ನು ಕಡ್ಡಾಯ ಮಾಡಿದೆ.

ಹೌದು, ಬಿಸಿಸಿಐ ಹೊಸ ನಿಯಮವನ್ನು ಜಾರಿಗೆ ತಂದಿದೆ. ಯುವ ಕ್ರಿಕೆಟಿಗರು ಐಪಿಎಲ್ ಪ್ರವೇಶಿಸಲು ಕನಿಷ್ಠ ಒಂದು ಪ್ರಥಮ ದರ್ಜೆ ಪಂದ್ಯವನ್ನು ಆಡುವುದನ್ನು ಕಡ್ಡಾಯಗೊಳಿಸಿದೆ. ಭಾನುವಾರ (ಸೆಪ್ಟೆಂಬರ್ 28) ಮುಂಬೈನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶೀಯ ಕ್ರಿಕೆಟ್ ಅನ್ನು ಮತ್ತಷ್ಟು ಬಲಪಡಿಸಲು ಈ ನಿಯಮವನ್ನು ಪರಿಚಯಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ. ಈ ನಿಯಮವನ್ನು 2026ರ ಐಪಿಎಲ್ ನಿಂದ ಜಾರಿಗೆ ತರಲಾಗುವುದು ಎಂದು ಬಿಸಿಸಿಐ ಹೇಳಿದೆ.

ಅಂದಹಾಗೆ, ಐಪಿಎಲ್ ಪ್ರವೇಶಿಸಲು ಯಾವುದೇ ವಯಸ್ಸಿನ ಮಿತಿಯಿಲ್ಲ. 19 ವರ್ಷದೊಳಗಿನ ಅನೇಕ ಕ್ರಿಕೆಟಿಗರು ಈಗಾಗಲೇ ಐಪಿಎಲ್‌ನಲ್ಲಿ ಆಡಿದ್ದಾರೆ. ಈಗಿನ ಕಾಲದ ಕ್ರಿಕೆಟಿಗರು ಹೆಚ್ಚು ಟಿ20ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಟೆಸ್ಟ್ ಮತ್ತು ಏಕದಿನ ಪಂದ್ಯಗಳತ್ತ ಗಮನವನ್ನೇ ಹರಿಸುತ್ತಿಲ್ಲ. ಇದೊಂದು ಕಳವಳಕಾರಿ ಬೆಳವಣಿಗೆ ಎಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೀಗ ಬಿಸಿಸಿಐ ಕನಿಷ್ಠ ಒಂದು ಪ್ರಥಮ ದರ್ಜೆ ಪಂದ್ಯವನ್ನು ಆಡಲೇಬೇಕೆಂಬ ನಿಯಮವನ್ನು ಜಾರಿಗೆ ತರುತ್ತಿರುವುದು ಒಳ್ಳೆಯ ನಿರ್ಧಾರ ಎಂದು ಹಿರಿಯ ಕ್ರಿಕೆಟಿಗರು ಹೇಳುತ್ತಿದ್ದಾರೆ. ಇದು ಯುವ ಆಟಗಾರರು ದೀರ್ಘ ಸ್ವರೂಪದಲ್ಲಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net