

ಬೆಂಗಳೂರು: ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ತಂಡಕ್ಕೆ ಬಿಕರಿಯಾಗದೆ ನಿರಾಸೆ ಅನುಭವಿಸಿದ್ದ ಗುಜರಾತ್ನ ವಿಕೆಟ್ ಕೀಪರ್-ಬ್ಯಾಟರ್ ಊರ್ವಿಲ್ ಪಟೇಲ್, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತ್ರಿಪುರ ವಿರುದ್ಧ 28 ಎಸೆತಗಳಲ್ಲೇ ಮೂರಂಕಿ ತಲುಪುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಭಾರತದ ಅತಿವೇಗದ ಶತಕ ಸಾಧಕ ಎನಿಸಿದ್ದಾರೆ.
26 ವರ್ಷದ ಊರ್ವಿಲ್, ರಿಷಭ್ ಪಂತ್ 2018ರಲ್ಲಿ ದೆಹಲಿ ಪರ 32 ಎಸೆತಗಳಲ್ಲಿ ಶತಕ ಸಿಡಿಸಿದ್ದ ಭಾರತೀಯ ದಾಖಲೆಯನ್ನು ಮುರಿದರು. ಊರ್ವಿಲ್ ಟಿ20 ಕ್ರಿಕೆಟ್ನ ಅತಿವೇಗದ ಶತಕ ಸಾಧನೆಯ ವಿಶ್ವದಾಖಲೆಯನ್ನು ಕೇವಲ ಒಂದು ಎಸೆತದಿಂದ ತಪ್ಪಿಸಿಕೊಂಡರು. ಈಸ್ಟೋನಿಯಾದ ಸಾಹಿಲ್ ಚೌಹಾಣ್ ಹಾಲಿ ವರ್ಷ ಸೈಪ್ರಸ್ ವಿರುದ್ಧ 27 ಎಸೆತಗಳಲ್ಲೇ ಶತಕ ಸಿಡಿಸಿರುವುದು ಟಿ20ಯಲ್ಲಿ ವಿಶ್ವದಾಖಲೆಯಾಗಿದೆ.
ಕಳೆದ ವರ್ಷದ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದ ಊರ್ವಿಲ್, ಪಂದ್ಯ ಆಡುವ ಅವಕಾಶ ಪಡೆಯದೆ ಈ ವರ್ಷ ರಿಲೀಸ್ ಆಗಿದ್ದರು ಮತ್ತು ಇತ್ತೀಚೆಗೆ ನಡೆದ ಹರಾಜಿನಲ್ಲೂ ಅವರಿಗೆ ಯಾರೂ ಬಿಡ್ ಮಾಡಿರಲಿಲ್ಲ.
ಊರ್ವಿಲ್ ಕಳೆದ ವರ್ಷ ಇದೇ ದಿನದಂದು (ನ.27) ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ 41 ಎಸೆತಗಳಲ್ಲೇ ಶತಕ ಸಿಡಿಸಿದ್ದರು. ಇದು ಲಿಸ್ಟ್ ಎ ಏಕದಿನ ಕ್ರಿಕೆಟ್ನಲ್ಲಿ ಭಾರತೀಯರ 2ನೇ ಅತಿವೇಗದ ಶತಕವೆನಿಸಿದೆ.
ಅರುಣಾಚಲ 32 ರನ್ಗೆ ಆಲೌಟ್!
ಜಮ್ಮು&ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಅರುಣಾಚಲ ಪ್ರದೇಶ 9.1 ಓವರ್ಗಳಲ್ಲೇ 32 ರನ್ಗಳಿಗೆ ಆಲೌಟ್ ಆಯಿತು. ಇದು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡವೊಂದರ 2ನೇ ಕನಿಷ್ಠ ಮೊತ್ತವಾಗಿದೆ. 2009ರಲ್ಲಿ ಜಾರ್ಖಂಡ್ ವಿರುದ್ಧ ತ್ರಿಪುರ 30 ರನ್ಗಳಿಗೆ ಆಲೌಟ್ ಆಗಿದ್ದು ಕನಿಷ್ಠವಾಗಿದೆ. ಜಮ್ಮು&ಕಾಶ್ಮೀರ 3 ಓವರ್ಗಳಲ್ಲೇ ವಿಕೆಟ್ ನಷ್ಟವಿಲ್ಲದೆ 34 ರನ್ ಗಳಿಸಿ ಜಯಿಸಿತು.
ಅರುಣಾಚಲ ಪರ ಯಾವ ಬ್ಯಾಟರ್ ಕೂಡ ಎರಡಂಕಿ ತಲುಪಲಿಲ್ಲ. 8 ಇತರ ರನ್ಗಳೇ ತಂಡಕ್ಕೆ ಗರಿಷ್ಠ ಕೊಡುಗೆ. ಐಪಿಎಲ್ ಮೆಗಾ ಹರಾಜಿನಲ್ಲಿ 6 ಕೋಟಿ ರೂ.ಗೆ ಆರ್ಸಿಬಿ ಸೇರಿದ ಜಮ್ಮು&ಕಾಶ್ಮೀರದ ವೇಗಿ ರಸಿಕ್ ದಾರ್ 2 ಓವರ್ಗಳಲ್ಲಿ 6 ರನ್ಗೆ 1 ವಿಕೆಟ್ ಕಬಳಿಸಿದರೆ, 35 ಲಕ್ಷ ರೂ.ಗೆ ರಾಜಸ್ಥಾನ ಸೇರಿದ ಯಧ್ವೀರ್ ಸಿಂಗ್ ಚರಕ್ 2 ವಿಕೆಟ್ ಗಳಿಸಿದರು. ಅಕಿಬ್ ನಬಿ 3 ಮತ್ತು ಅಬಿದ್ ಮುಷ್ತಾಕ್ 4 ವಿಕೆಟ್ ಗಳಿಸಿದರು.