ಈ ಇಬ್ಬರು ಆಟಗಾರರಿಂದ ಮಾತ್ರ ಕೊಹ್ಲಿ, ರೋಹಿತ್​ ಸ್ಥಾನ ತುಂಬಲು ಸಾಧ್ಯ! ಮಾಜಿ ಕ್ರಿಕೆಟಿಗನ ಹೇಳಿಕೆ

Team India
Published on

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ 17 ವರ್ಷಗಳ ನಂತರ ಮತ್ತೆ ಟಿ20 ವಿಶ್ವಕಪ್​ಗೆ ಮುತ್ತಿಟ್ಟಿದೆ. ಭಾರತೀಯ ಕ್ರೀಡಾಭಿಮಾನಿಗಳ ಪಾಲಿಗೆ ಇದು ಹೆಮ್ಮೆಯ ಸಂಗತಿಯಾಗಿದೆ. ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿರುವಾಗ ನಾಯಕ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಟಿ20 ಮಾದರಿ ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡಿದ್ದು ಅಭಿಮಾನಿಗಳಿಗೆ ಆಘಾತವಾಯಿತು.

ಟೀಮ್​ ಇಂಡಿಯಾ ಪರವಾಗಿ ಟಿ20 ಕ್ರಿಕೆಟ್‌ನಲ್ಲಿ ಈ ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ನೋಡಲು ಇನ್ಮುಂದೆ ಸಾಧ್ಯವಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಈ ರೀತಿ ಇಬ್ಬರು ಒಟ್ಟಿಗೆ ನಿವೃತ್ತಿಯಾದರೆ ಟೀಮ್​ ಇಂಡಿಯಾಗೆ ಯಾರು ಬೆಂಬಲ ನೀಡುತ್ತಾರೆ ಎಂದು ಕೆಲವರು ಪ್ರಶ್ನಿಸಿದ್ದರು. ಆದರೆ, ಇವರಿಬ್ಬರ ನಂತರ ಟೀಮ್ ಇಂಡಿಯಾಗೆ ಟಿ20 ಕ್ರಿಕೆಟ್‌ನ ಬೆನ್ನೆಲುಬಾಗುವ ಇಬ್ಬರು ಆಟಗಾರರು ಈಗಾಗಲೇ ತಂಡದಲ್ಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಜತಿನ್ ಪರಾಂಜಪೆ ಹೇಳಿದ್ದಾರೆ.

ಪ್ರಸ್ತುತ ಸಿಎಸಿ (ಕ್ರಿಕೆಟ್ ಸಲಹಾ ಸಮಿತಿ) ಸದಸ್ಯ ಮತ್ತು ಟೀಮ್​ ಇಂಡಿಯಾದ ಮಾಜಿ ಆಯ್ಕೆಗಾರರಾಗಿರುವ ಮಾಜಿ ಕ್ರಿಕೆಟಿಗ ಜತಿನ್, ಭಾರತ ತಂಡದ ಬೆನ್ನೆಲುಬಾಗಿರುವ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ. ಕೊಹ್ಲಿ ಮತ್ತು ರೋಹಿತ್ ನಂತರ, ಆ ರೇಂಜ್‌ನಲ್ಲಿ ಭಾರತವನ್ನು ಬೆಂಬಲಿಸುವ ಆಟಗಾರರೆಂದರೆ ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಎಂದು ಹೇಳಿದ್ದಾರೆ. ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ನಿವೃತ್ತಿಯಿಂದ ಟಿ20ಯಲ್ಲಿ ಟೀಮ್​ ಇಂಡಿಯಾ ದುರ್ಬಲವಾಗಿದ್ದರೂ ಆ ದೌರ್ಬಲ್ಯ ಹೆಚ್ಚು ಕಾಲ ಉಳಿಯುವುದಿಲ್ಲ ಎಂದಿದ್ದಾರೆ.

ಟೀಮ್​ ಇಂಡಿಯಾದ ಭವಿಷ್ಯ ಅತ್ಯುತ್ತಮ ಯುವ ಕ್ರಿಕೆಟಿಗರ ಕೈಯಲ್ಲಿದೆ. ಟಿ20ಯಲ್ಲಿ ರಿಷಬ್ ಪಂತ್ ಮೂರನೇ ಸ್ಥಾನದಲ್ಲಿ ಮತ್ತು ಸೂರ್ಯಕುಮಾರ್ ಯಾದವ್ ನಾಲ್ಕನೇ ಸ್ಥಾನದಲ್ಲಿ ಆಡಿದರೆ ಟೀಮ್​ ಇಂಡಿಯಾಗೆ ಹಿನ್ನಡೆಯೇ ಇಲ್ಲ. ಪಂತ್ ಹಾಗೂ ಸೂರ್ಯ ಭವಿಷ್ಯದಲ್ಲಿ ಟೀಮ್​ ಇಂಡಿಯಾದ ಬೆನ್ನೆಲುಬಾಗಲಿದ್ದು, ಐದನೇ ಸ್ಥಾನದಲ್ಲಿ ಯಾರು ಆಡಬೇಕು ಎಂದು ನಿರ್ಧರಿಸಿದರೆ ಟೀಮ್​ ಇಂಡಿಯಾ ಈಗಿನಂತೆ ಬಲಿಷ್ಠವಾಗಲಿದೆ ಎಂದು ಜತಿನ್ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಟಿ20ಯಲ್ಲಿ ಐದನೇ ಸ್ಥಾನದಲ್ಲಿ ಆಡುವ ಸಾಧ್ಯತೆಯಿದೆ. ಮೇಲಾಗಿ ಅವರು ಟಿ20ಯಲ್ಲಿ ಟೀಮ್​ ಇಂಡಿಯಾದ ನಾಯಕರಾಗುತ್ತಾರೆ ಎಂದು ಕ್ರಿಕೆಟ್ ಅಭಿಮಾನಿಗಳು ನಂಬಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net