ವಾಂಡರರ್ಸ್‌ನಲ್ಲಿ ಭಾರತ ಬಲಿಷ್ಠ! ದ್ರಾವಿಡ್-ಕೊಹ್ಲಿಗೆ ಅದೃಷ್ಟದ ಮೈದಾನ...

wonderers test web
Published on

ಜೊಹಾನ್ಸ್‌ಬರ್ಗ್: ಸೆಂಚುರಿಯನ್‌ನಲ್ಲಿ ಟೆಸ್ಟ್ ಗೆದ್ದ ಏಷ್ಯಾದ ಮೊದಲ ತಂಡವೆಂಬ ಐತಿಹಾಸಿಕ ದಾಖಲೆ ಬರೆದಿರುವ ಭಾರತ ತಂಡ, ಜೊಹಾನ್ಸ್‌ಬರ್ಗ್‌ನಲ್ಲಿ ಸೋಮವಾರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲೂ ಗೆದ್ದು ಸರಣಿ ವಶಪಡಿಸಿಕೊಳ್ಳುವತ್ತ ಗಮನವಿಟ್ಟಿದೆ. ವಾಂಡರರ್ಸ್‌ ಮೈದಾನದಲ್ಲಿ ಭಾರತ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಆತಿಥೇಯರ ಎದುರು ಹೊಂದಿರುವ ಬಲಿಷ್ಠ ದಾಖಲೆ ಇನ್ನಷ್ಟು ಆತ್ಮವಿಶ್ವಾಸವನ್ನು ತುಂಬಲಿದೆ.

1992ರಿಂದ ಇದುವರೆಗೆ ಭಾರತ ತಂಡ ವಾಂಡರರ್ಸ್‌ನಲ್ಲಿ 5 ಟೆಸ್ಟ್ ಆಡಿದ್ದು, ಒಂದರಲ್ಲೂ ಸೋತಿಲ್ಲ. 2 ಗೆಲುವು ದಾಖಲಿಸಿರುವ ಭಾರತ ತಂಡ, 3ರಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಜೊಹಾನ್ಸ್‌ಬರ್ಗ್ ಭಾರತ ತಂಡಕ್ಕೆ ‘ವಿದೇಶದ ತವರು ಮೈದಾನ’ದಂತಿದೆ!

ಹಾಲಿ ಕೋಚ್ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ 2006ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ಮೊದಲ ಗೆಲುವು ದಾಖಲಿಸಿತ್ತು. ಅದು ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತಕ್ಕೆ ಚೊಚ್ಚಲ ಟೆಸ್ಟ್ ಗೆಲುವು ಕೂಡ ಆಗಿತ್ತು. ಬಳಿಕ 2018ರ ಪ್ರವಾಸದಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 63 ರನ್‌ಗಳಿಂದ ಗೆಲುವು ದಾಖಲಿಸಿತ್ತು. ಇದೀಗ ಕೊಹ್ಲಿಗೆ ಜೊಹಾನ್ಸ್‌ಬರ್ಗ್‌ನಲ್ಲಿ 2 ಟೆಸ್ಟ್ ಗೆದ್ದ ಮೊದಲ ಭಾರತೀಯ ನಾಯಕ ಎನಿಸುವ ಅವಕಾಶ ಒಲಿದುಬಂದಿದೆ.

ದ್ರಾವಿಡ್-ಕೊಹ್ಲಿ ಇಬ್ಬರಿಗೂ ಇದು ಅದೃಷ್ಟದ ಮೈದಾನವೆನಿಸಿದ್ದು, ಈ ಬಾರಿ ಇಬ್ಬರೂ ಒಂದಾಗಿ ಟೀಮ್ ಇಂಡಿಯಾದಲ್ಲಿರುವುದರಿಂದ ಸರಣಿ ಗೆಲುವಿನೊಂದಿಗೆ ಇನ್ನಷ್ಟು ವಿಶೇಷವಾದುದನ್ನು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.

ಮಿಷನ್ ಕಂಪ್ಲೀಟ್!

ಭಾರತ ತಂಡ ದಕ್ಷಿಣ ಆಫ್ರಿಕಾ ಹೊರತಾಗಿ ವಿಶ್ವದ ಎಲ್ಲ ಟೆಸ್ಟ್ ಆಡುವ ದೇಶಗಳಲ್ಲಿ (ಇತ್ತೀಚೆಗಿನ ಐರ್ಲೆಂಡ್, ಅಫ್ಘಾನಿಸ್ತಾನ ಹೊರತಾಗಿ) ಸರಣಿ ಗೆದ್ದ ಸಾಧನೆ ಮಾಡಿದೆ. ಇದೀಗ ದಕ್ಷಿಣ ಆಫ್ರಿಕಾದಲ್ಲೂ ಟೆಸ್ಟ್ ಸರಣಿ ಗೆಲುವು ದಾಖಲಿಸುವ ಮೂಲಕ ‘ಮಿಷನ್ ಕಂಪ್ಲೀಟ್’ ಮಾಡಲು ಟೀಮ್ ಇಂಡಿಯಾ ಸಜ್ಜಾಗಿದೆ. ಭಾರತ ತಂಡ ಈ ಹಿಂದಿನ 7 ದಕ್ಷಿಣ ಆಫ್ರಿಕಾ ಪ್ರವಾಸಗಳಲ್ಲಿ 6 ಬಾರಿ ಸರಣಿ ಸೋತಿದ್ದರೆ, ಒಮ್ಮೆ ಮಾತ್ರ (2010) ಸಮಬಲ ಸಾಧಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net