ಪಾಕ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆ, ವಿಡಿಯೋ ವೈರಲ್​

Kohli
Published on

ಕಾಬೂಲ್​: ನಿನ್ನೆ (ಅ.24) ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​ 12 ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಜಯ ದಾಖಲಿಸಿದೆ. ಇದರ ಬೆನ್ನಲ್ಲೇ ದೇಶಾದ್ಯಂತ ಸಂಭ್ರಮಾಚರಣೆ ನಡೆಯಿತು. ಅಚ್ಚರಿಯೆಂದರೆ, ನೆರೆಯ ಅಫ್ಘಾನಿಸ್ತಾನದಲ್ಲೂ ಭಾರತದ ಗೆಲುವನ್ನು ಸಂಭ್ರಮಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಯುದ್ಧ ಪೀಡಿತ ಆಫ್ಘಾನ್​ನಲ್ಲಿ ಭಾರತವು ವಿದೇಶಿ ನೆರವು ನೀಡುವ ಮೂಲಕ ಅನೇಕ ಮೂಲ ಸೌಕರ್ಯಗಳನ್ನು ನಿರ್ಮಿಸಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಆಫ್ಘಾನ್​ನ ಆತಂರಿಕ ವ್ಯವಹಾರಗಳಲ್ಲಿ ಪಾಕ್​ ಮೂಗು ತೂರಿಸುತ್ತಿದೆ. ಆಫ್ಘಾನ್​ ಮೇಲೆ ತಾಲಿಬಾನ್​ ದಾಳಿ ನಡೆಸಿದಾಗಲೂ ಅದಕ್ಕೆ ಕುಮ್ಮಕ್ಕು ನೀಡಿದ್ದು ಇದೇ ಪಾಕ್​. ಹೀಗಾಗಿಯೇ ಪಾಕ್​ ಮೇಲೆ ಆಫ್ಘಾನ್ನರಿಗೆ ಅತೀವ ಕೋಪವಿದೆ. ನಿನ್ನೆ ನಡೆದ ಪಂದ್ಯದಲ್ಲಿ ಭಾರತ, ಪಾಕ್​ ಎದುರು ಗೆಲುವು ಸಾಧಿಸಿದ್ದು, ಆಫ್ಘಾನ್ನರಿಗೂ ಖುಷಿ ತರಿಸಿದೆ.

ಟ್ವಿಟರ್​ ಬಳಕೆದಾರ @NasroSalik ಕಾಬೂಲ್‌ನಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಾರುಕಟ್ಟೆ ಪ್ರದೇಶದಲ್ಲಿ ಟಿವಿ ಮುಂದೆ ಆಫ್ಘಾನ್ನರು ಕಿಕ್ಕಿರಿದು ನಿಂತಿರುವುದು ವಿಡಿಯೋದಲ್ಲಿದೆ. ಪಾಕಿಸ್ತಾನದ ವಿರುದ್ಧ ಭಾರತ ಗೆಲುವಿನ ಮುದ್ರೆ ಒತ್ತುತ್ತಿದ್ದಂತೆ ಆಫ್ಘಾನ್ನರು ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ, ಎದುರಾಳಿ ಪಾಕಿಸ್ತಾನ ತಂಡದ 8 ವಿಕೆಟ್ ಕಬಳಿಸಿ 159 ರನ್​ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. 160ರನ್​ಗಳ ಗುರಿ ಬೆನ್ನು ಹತ್ತಿದ ಭಾರತ, ವಿರಾಟ್​ ಕೊಹ್ಲಿ (53 ಎಸೆತಗಳಲ್ಲಿ ಅಜೇಯ 82) ಮತ್ತು ಹಾರ್ದಿಕ್​ ಪಾಂಡ್ಯ (40) ಅವರ ಅಮೋಘ ಬ್ಯಾಟಿಂಗ್​ ನೆರವಿನಿಂದ ಅದ್ಭುತ ಗೆಲುವು ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net