ರೋಚಕ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ; ವಿರೋಚಿತ ಸೋಲು ಕಂಡು ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಇಂಗ್ಲೆಂಡ್

Afghanistan
Published on

ಲಾಹೋರ್: ಯುವ ಆರಂಭಿಕ ಇಬ್ರಾಹಿಂ ಜದ್ರಾನ್ (177 ರನ್, 146 ಎಸೆತ, 12 ಬೌಂಡರಿ, 6 ಸಿಕ್ಸರ್) ಸಿಡಿಸಿದ ದಾಖಲೆಯ ಶತಕದ ಬಲದಿಂದ ಅಫ್ಘಾನಿಸ್ತಾನ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ವಿರುದ್ಧ 8 ರನ್​ಗಳಿಂದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಆಫ್ಘನ್ ತಂಡ ಸೆಮೀಸ್ ಆಸೆ ಜೀವಂತ ಉಳಿಸಿಕೊಂಡರೆ, ಇಂಗ್ಲೆಂಡ್ ತಂಡ ಲೀಗ್ ಹಂತದಲ್ಲೇ ಹೊರಬಿದ್ದಿದೆ.

ಗಡಾಫಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಬಿ ಗುಂಪಿನ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಅಫ್ಘಾನಿಸ್ತಾನ, ಆಂಗ್ಲರು ನೀಡಿದ ಆರಂಭಿಕ ಆಘಾತದಿಂದ ಮೊದಲ 15 ಓವರ್​ಗಳಲ್ಲಿ ರನ್ ಗಳಿಸಲು ಪರದಾಡಿತು. ಆದರೆ ನಂತರ 23 ವರ್ಷದ ಇಬ್ರಾಹಿಂ ಜದ್ರಾನ್, ನಾಯಕ ಹಶ್ಮತ್​ಉಲ್ಲಾ ಶಾಹಿದಿ (40), ಅಜ್ಮತ್​ಉಲ್ಲಾ ಒಮರ್ಜಾಯಿ (41) ಮತ್ತು ಮೊಹಮದ್ ನಬಿ (40) ಬೆಂಬಲದೊಂದಿಗೆ ದಿಟ್ಟ ಆಟವಾಡಿ ಪಂದ್ಯದ ಚಿತ್ರಣ ಬದಲಾಯಿಸಿದರು. ಕೊನೇ 10 ಓವರ್​ಗಳಲ್ಲಿ 113 ರನ್ ದೋಚಿದ ಅಫ್ಘಾನಿಸ್ತಾನ ಅಂತಿಮವಾಗಿ 7 ವಿಕೆಟ್​ಗೆ 325 ರನ್ ಪೇರಿಸಿತು. ಪ್ರತಿಯಾಗಿ ಅನುಭವಿ ಬ್ಯಾಟರ್ ಜೋ ರೂಟ್ (120 ರನ್, 111 ಎಸೆತ, 11 ಬೌಂಡರಿ, 1 ಸಿಕ್ಸರ್) ಶತಕದ ಹೋರಾಟದ ನಡುವೆಯೂ ಇಂಗ್ಲೆಂಡ್ 49.5 ಓವರ್​ಗಳಲ್ಲಿ 317 ರನ್​ಗಳಿಗೆ ಸರ್ವಪತನ ಕಂಡು ಶರಣಾಯಿತು.

ಅಫ್ಘಾನಿಸ್ತಾನ: 7 ವಿಕೆಟ್​ಗೆ 325 (ಇಬ್ರಾಹಿಂ ಜದ್ರಾನ್ 177, ರಹಮತ್ ಷಾ 4, ಶಾಹಿದಿ 40, ಒಮರ್ಜಾಯಿ 41, ನಬಿ 40, ಆರ್ಚರ್ 64ಕ್ಕೆ 3, ಲಿವಿಂಗ್​ಸ್ಟೋನ್ 28ಕ್ಕೆ 2, ಓವರ್ಟನ್ 72ಕ್ಕೆ 1, ಆದಿಲ್ 60ಕ್ಕೆ 1). ಇಂಗ್ಲೆಂಡ್: 49.5 ಓವರ್​ಗಳಲ್ಲಿ 317 (ಸಾಲ್ಟ್ 12, ಡಕೆಟ್ 38, ಜೇಮಿ ಸ್ಮಿತ್ 9, ರೂಟ್ 120, ಬ್ರೂಕ್ 25, ಬಟ್ಲರ್ 38, ಲಿವಿಂಗ್​ಸ್ಟೋನ್ 10, ಓವರ್ಟನ್ 32, ಒಮರ್ಜಾಯಿ 58ಕ್ಕೆ 5, ನಬಿ 57ಕ್ಕೆ 2).

ರೂಟ್ 6 ವರ್ಷಗಳ ಬಳಿಕ ಸಿಡಿಸಿದ ಶತಕ ವ್ಯರ್ಥ

ಬೃಹತ್ ಮೊತ್ತದ ಚೇಸಿಂಗ್​ಗೆ ನಿಂತ ಇಂಗ್ಲೆಂಡ್​ಗೆ ಉತ್ತಮ ಆರಂಭ ಸಿಗಲಿಲ್ಲ. ಫಿಲ್ ಸಾಲ್ಟ್ (12) ಮತ್ತು ಜೇಮಿ ಸ್ಮಿತ್ (9) ಬೇಗನೆ ಪೆವಿಲಿಯನ್​ಗೆ ಮರಳಿದರು. ಆಗ ಕಳೆದ ಪಂದ್ಯದ ಶತಕವೀರ ಬೆನ್ ಡಕೆಟ್ (38) ಮತ್ತು ರೂಟ್ 3ನೇ ವಿಕೆಟ್​ಗೆ 63 ಎಸೆತಗಳಲ್ಲಿ 63 ರನ್ ಸೇರಿಸಿ ಚೇತರಿಕೆ ಒದಗಿಸಿದರು. ಡಕೆಟ್ ವಿಕೆಟ್ ಉರುಳಿಸುವ ಮೂಲಕ ರಶೀದ್ ಖಾನ್ ಈ ಜತೆಯಾಟವನ್ನು ಬೇರ್ಪಡಿಸಿದರು. ನಂತರ ಹ್ಯಾರಿ ಬ್ರೂಕ್ (25) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆಗ ರೂಟ್ ಜತೆಗೂಡಿದ ನಾಯಕ ಜೋಸ್ ಬಟ್ಲರ್ (38) ಆಂಗ್ಲರ ಗೆಲುವಿನ ಆಸೆಗೆ ಮತ್ತೆ ಬಲ ತುಂಬಿದರು. ಇವರಿಬ್ಬರು 5ನೇ ವಿಕೆಟ್​ಗೆ 91 ಎಸೆತಗಳಲ್ಲಿ 83 ರನ್ ಕಸಿದರು. ರೂಟ್ 98 ಎಸೆತಗಳಲ್ಲಿ ಏಕದಿನ ಕ್ರಿಕೆಟ್​ನ 17ನೇ ಶತಕ ಸಿಡಿಸಿದರು. ಇದು 2019ರ ವಿಶ್ವಕಪ್ ಬಳಿಕ ಏಕದಿನದಲ್ಲಿ ಅವರು ಸಿಡಿಸಿದ ಮೊದಲ ಶತಕವಾಗಿದೆ. 46ನೇ ಓವರ್​ನಲ್ಲಿ ರೂಟ್ ಔಟಾದ ಬಳಿಕ ಇಂಗ್ಲೆಂಡ್ ಮತ್ತೆ ಕುಸಿತ ಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net