

ಗ್ರೇಟರ್ ನೋಯ್ಡ: ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯ ಮಳೆಯಿಂದಾಗಿ ಕನಿಷ್ಠ ಟಾಸ್ ಕೂಡ ಇಲ್ಲದೆ ರದ್ದುಗೊಂಡಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೂ ಎಸೆತವಿಲ್ಲದೆ ರದ್ದುಗೊಂಡ 8ನೇ ಟೆಸ್ಟ್ ಪಂದ್ಯ ಇದಾಗಿದ್ದು, ಭಾರತದಲ್ಲಿ ಇಂಥ ಪ್ರಥಮ ದೃಷ್ಟಾಂತ ಎನಿಸಿದೆ. ಶಹೀದ್ ವಿಜಯ್ ಸಿಂಗ್ ಪಾಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಿಗದಿಯಾಗಿದ್ದ ಪಂದ್ಯದ ಮೊದಲೆರಡು ದಿನದ ಆಟ ಒದ್ದೆಗೊಂಡ ಮೈದಾನದಿಂದ ರದ್ದುಗೊಂಡರೆ, ನಂತರದ 3 ದಿನ ನಿರಂತರ ಮಳೆಯಿಂದಾಗಿ ಸ್ಥಗಿತಗೊಳಿಸಲಾಯಿತು.
5ನೇ ಹಾಗೂ ಅಂತಿಮ ದಿನವೂ ಬೆಳಗ್ಗೆಯೇ ಜೋರಾಗಿ ಮಳೆ ಸುರಿಯಿತು. ಈ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿರಲಿಲ್ಲ. ಇದು ಕಳೆದ 26 ವರ್ಷಗಳಲ್ಲಿ ಒಂದೂ ಎಸೆತವಿಲ್ಲದೆ ರದ್ದುಗೊಂಡ ಮೊದಲ ಟೆಸ್ಟ್ ಎನಿಸಿದೆ. 1890ರಿಂದ ಏಳು ಪಂದ್ಯಗಳು ಒಂದು ಎಸೆತ ಕಾಣದೆ ರದ್ದುಗೊಂಡರೆ, 1998ರಲ್ಲಿ ಕೊನೆಯದಾಗಿ ಈ ದೃಷ್ಟಾಂತ ಎದುರಾಗಿತ್ತು. ನ್ಯೂಜಿಲೆಂಡ್ ತಂಡ ಇನ್ನು 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳಲಿದ್ದು, ಬಳಿಕ ಆತಿಥೇಯರ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಆಡುವ ಸಲುವಾಗಿ ಭಾರತಕ್ಕೆ ಮರಳಲಿದೆ. ಅಕ್ಟೋಬರ್ 16ರಿಂದ ಬೆಂಗಳೂರಿನಲ್ಲಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.