ಬಿಎಫ್​ಸಿಗೆ ನಿರಾಸೆ: ಸಡನ್ ಡೆತ್​ನಲ್ಲಿ ಛೇಟ್ರಿ ಪಡೆ ಪರಾಭವ

Sp 00
Published on

ಬೆಂಗಳೂರು: ಸಡನ್​ಡೆತ್ ಸಾಹಸದಲ್ಲಿ ಮಾಜಿಯಾ ಎಸ್ ಆಂಡ್ ಆರ್​ಸಿ ತಂಡದ ವಿರುದ್ಧ ಸೋಲು ಕಂಡ ಬೆಂಗಳೂರು ಎಫ್​ಸಿ ತಂಡ ಎಎಫ್​ಸಿ ಕಪ್ ಫುಟ್​ಬಾಲ್ ಟೂರ್ನಿಯ ಪ್ಲೇಆಫ್ ಹಂತದಲ್ಲಿಯೇ ನಿರ್ಗಮಿಸಿದೆ.

ಬುಧವಾರ ಕಂಠೀರವ ಸ್ಟೇಡಿಯಂನಲ್ಲಿ ನಡೆದ ನಡೆದ ಪ್ಲೇ ಆಫ್ ಹಂತದ 2ನೇ ಚರಣದ ಪಂದ್ಯ ನಿಗದಿತ ಸಮಯದಲ್ಲಿ 3-2ರಿಂದ ಬಿಎಫ್​ಸಿ ಗೆಲುವಿನೊಂದಿಗೆ ಅಂತ್ಯ ಕಂಡರೂ, ಗೋಲು ಲೆಕ್ಕಾಚಾರದಲ್ಲಿ 4-4 ಸಮಬಲ (ಮೊದಲ ಚರಣದಲ್ಲಿ ಬಿಎಫ್​ಸಿ 1-2 ರಿಂದ ಸೋಲು ಕಂಡಿತ್ತು) ಕಂಡಿತ್ತು. ಫಲಿತಾಂಶ ನಿರ್ಣಯಕ್ಕಾಗಿ ನಡೆದ ಪೆನಾಲ್ಟಿ ಶೂಟೌಟ್​ನಲ್ಲಿ ಎರಡೂ ತಂಡಗಳು ಮೊದಲ ಐದು ಅವಕಾಶಗಳ ಅಂತ್ಯಕ್ಕೆ 3-3 ರಿಂದ ಸಮಬಲ ಸಾಧಿಸಿದ್ದವು. ನಂತರ ನಡೆದ ಸಡನ್ ಡೆತ್​ನ ಮೊದಲ ಅವಕಾಶದಲ್ಲಿ ಬಿಎಫ್​ಸಿಯ ಪರಾಗ್ ಶ್ರೀನಿವಾಸ್ ಗೋಲು ಬಾರಿಸಲು ವಿಫಲರಾದರೆ, ಮಾಜಿಯಾ ತಂಡದ ಪರವಾಗಿ ಹುಸೇನ್ ಬಾರಿಸಿದ ಗೋಲು ಬಿಎಫ್​ಸಿ ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧುರನ್ನು ವಂಚಿಸಿತು. ಇದರಿಂದಾಗಿ ಮಾಜಿಯಾ ಪೆನಾಲ್ಟಿಯಲ್ಲಿ 4-3ರಿಂದ ಬಿಎಫ್​ಸಿ ತಂಡವನ್ನು ಸೋಲಿಸಿ 2020ರ ಎಎಫ್​ಸಿ ಕಪ್​ನ ಗುಂಪು ಹಂತಕ್ಕೆ ಅರ್ಹತೆ ಪಡೆದುಕೊಂಡಿತು. ನಿಗದಿತ ಸಮಯದಲ್ಲಿ ಬಿಎಫ್​ಸಿ ಪರವಾಗಿ ನಾಯಕ ಸುನೀಲ್ ಛೇಟ್ರಿ 2 ಗೋಲು ಬಾರಿಸಿದ್ದರೆ, ದೆಶಾರ್ನ್ ಬ್ರೌನ್ ಒಂದು ಗೋಲು ಸಿಡಿಸಿದ್ದರು.

ಐಎಸ್​ಎಲ್ ಉಪಾಂತ್ಯ ವೇಳಾಪಟ್ಟಿ ಪ್ರಕಟ: ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಸೆಮಿಫೈನಲ್ ವೇಳಾಪಟ್ಟಿ ಪ್ರಕಟಗೊಂಡಿದ್ದು, ಬಿಎಫ್​ಸಿ ತಂಡ ಎಟಿಕೆ ವಿರುದ್ಧ ಮಾರ್ಚ್ 1ರಂದು ಬೆಂಗಳೂರಿನಲ್ಲಿ ಸೆಣಸಲಿದ್ದರೆ, ಮಾರ್ಚ್ 8ರಂದು ಕೋಲ್ಕತದಲ್ಲಿ 2ನೇ ಚರಣ ಆಡಲಿದೆ. ಚೆನ್ನೈಯಿನ್ ಎಫ್​ಸಿ-ಎಫ್​ಸಿ ಗೋವಾ ತಂಡಗಳು ಫೆ. 29 ಮತ್ತು ಮಾ. 7ರಂದು ಕಾದಾಡಲಿವೆ. ಮಾ. 14ರಂದು ಫೈನಲ್ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net