ಭಾರತೀಯ ಪ್ರೇಕ್ಷಕರ ವಿರುದ್ಧ ಐಸಿಸಿಗೆ ದೂರು: ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮುಖಭಂಗ

New-Project-1-8
Published on

ನವದೆಹಲಿ: ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ನಡೆದ ಭಾರತ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ವೇಳೆ ಆತಿಥೇಯ ಪ್ರೇಕ್ಷಕರು ತೋರಿದ ವರ್ತನೆಯ ಬಗ್ಗೆ ಆಕ್ಷೇಪವೆತ್ತಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಐಸಿಸಿಗೆ ದೂರು ನೀಡಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಐಸಿಸಿ ನಿರಾಕರಿಸುವುದರೊಂದಿಗೆ ಪಿಸಿಬಿ ಮುಖಭಂಗ ಎದುರಿಸಿದೆ.

ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ನ ಬಹುನಿರೀಕ್ಷಿತ ಭಾರತ-ಪಾಕ್ ಪಂದ್ಯದಲ್ಲಿ ಪಾಕ್ ಆಟಗಾರರನ್ನು ಗುರಿಯಾಗಿಸಿಕೊಂಡು ಭಾರತೀಯ ಪ್ರೇಕ್ಷಕರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ವರ್ತನೆ ತೋರಿದ್ದಾರೆ. ಇದು ಐಸಿಸಿ ಟೂರ್ನಿ ಆಯೋಜಿಸುವ ಕ್ರಮವಲ್ಲ ಎಂದು ಪಿಸಿಬಿ ದೂರು ಸಲ್ಲಿಸಿತ್ತು. ಆದರೆ ಐಸಿಸಿ ನೀತಿ ಸಂಹಿತೆಯ ಪ್ರಕಾರ, ಜನಾಂಗೀಯ ಆರೋಪ ಅಥವಾ ಆಟಗಾರರ ಮೇಲೆ ಪ್ರೇಕ್ಷಕರು ಹಲ್ಲೆ, ದೌರ್ಜನ್ಯ ನಡೆಸಿದರೆ ಜರುಗಿಸಬಹುದು. ಒಂದು ತಂಡ ಅಥವಾ ಗುಂಪಿನ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ ಎನ್ನಲಾಗಿದೆ.

ಪಂದ್ಯದ ವೇಳೆ ಭಾರತೀಯ ಅಭಿಮಾನಿಗಳು ‘ಜೈ ಶ್ರೀರಾಮ್’ ೋಷಣೆ ಕೂಗಿದ್ದರು. ಬಾಬರ್ ಅಜಮ್ ಟಾಸ್ ಸೋತ ವೇಳೆಯೂ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆಯೊಂದಿಗೆ ಮಿತಿ ಮಿರಿದ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಪಾಕ್ ದೂರು ನೀಡಿತ್ತು. ಪಂದ್ಯದ ವೇಳೆ ಹಾಜರಿದ್ದ ಪಿಸಿಬಿ ಅಧ್ಯಕ್ಷ ಝಕಾ ಆಶ್ರ್ ಮೂರು ದಿನಗಳ ಬಳಿಕ ಐಸಿಸಿಗೆ ದೂರು ನೀಡಿದ್ದಾರೆ. ಪಾಕ್ ಪತ್ರಕರ್ತರು, ಅಭಿಮಾನಿಗಳಿಗೆ ವೀಸಾ ವಿಳಂಬದ ಬಗ್ಗೆಯೂ ಅವರು ದೂರಿದ್ದರು.

ವಿಶ್ವಕಪ್ ಟೂರ್ನಿಯ ಪಂದ್ಯ ಬಿಸಿಸಿಐನ ಕಾರ್ಯಕ್ರಮ ಎನ್ನುವಂತೆ ಭಾಸವಾಯಿತು. ಪ್ರೇಕ್ಷಕರ ಬೆಂಬಲವೂ ಪಾಕ್ ಆಟಗಾರರಿಗೆ ದೊರೆಯಲಿಲ್ಲ. ತಂಡದ ಸೋಲು-ಗೆಲುವಿನಲ್ಲಿ ಬೆಂಬಲಿಗರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಸೋಲಿನ ಬಳಿಕ ಪಾಕ್ ಕೋಚ್ ಮಿಕ್ಕಿ ಅರ್ಥರ್ ಅಸಮಾಧಾನ ವ್ಯಕ್ತಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net