ಮಿಯಾಮಿ ಡಬಲ್ಸ್‌ನಲ್ಲಿ ಬೋಪಣ್ಣ ಚಾಂಪಿಯನ್

New-Project-26
Published on

ಮಿಯಾಮಿ: ಅಗ್ರಶ್ರೇಯಾಂಕಿತ ರೋಹನ್ ಬೋಪಣ್ಣ ಹಾಗೂ ಮ್ಯಾಥ್ಯೂ ಎಬ್ಡೆನ್ ಜೋಡಿ ಮಿಯಾಮಿ ಓಪನ್ ಎಟಿಪಿ ಮಾಸ್ಟರ್ಸ್‌-1000 ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಕನ್ನಡಿಗ ರೋಹನ್ ಬೋಪಣ್ಣ ವೃತ್ತಿ ಜೀವನದ 6ನೇ ಎಟಿಪಿ ಮಾಸ್ಟರ್ಸ್‌ ಪ್ರಶಸ್ತಿ ಜಯಿಸಿದಂತಾಗಿದೆ.

ಶನಿವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ 44 ವರ್ಷದ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ 6-7(3),6-3, 10-3 ರಿಂದ ಸೂಪರ ಟೈ ಬ್ರೇಕರ್‌ನಲ್ಲಿ ಎರಡನೇ ಶ್ರೇಯಾಂಕಿತ ಕ್ರೊವೇಷಿಯಾದ ಇವಾನ್ ಡೋಡಿಗ್ ಮತ್ತು ಅಮೆರಿಕದ ಆಸ್ಟಿನ್ ಕ್ರಾಜಿಸೆಕ್ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಮೊದಲ ಸೆಟ್‌ನಲ್ಲಿ ಟೈ ಬ್ರೇಕರ್‌ನಲ್ಲಿ ಹಿನ್ನಡೆ ಅನುಭವಿಸಿದ ಇಂಡೋ-ಆಸೀಸ್ ಜೋಡಿ ನಂತರದ ಸೆಟ್‌ನಲ್ಲಿ ಮೇಲುಗೈ ಸಾಧಿಸಿ ಸಮಬಲ ಸಾಧಿಸಿತು. ನಿರ್ಣಾಯಕ ಸೂಪರ್ ಟೈ ಬ್ರೇಕರ್‌ನಲ್ಲಿ ಗೆಲುವು ಒಲಿಸಿಕೊಂಡಿತು. 44 ವರ್ಷದ ಬೋಪಣ್ಣಗೆ ಮಿಯಾಮಿಯಲ್ಲಿ ಮೊದಲ ಪ್ರಶಸ್ತಿ ಇದಾಗಿದ್ದು,ಈ ಸಾಧನೆ ಮಾಡಿದ 4ನೇ ಭಾರತೀಯ ಆಟಗಾರ ಎನಿಸಿದರು. ಜತೆಗೆ ಎಟಿಪಿ ಪ್ರಶಸ್ತಿ ಜಯಿಸಿದ ಅತಿ ಹಿರಿಯ ಆಟಗಾರ ಎನಿಸಿದ್ದಾರೆ. ಪ್ರಶಸ್ತಿ ಗೆಲುವಿನೊಂದಿಗೆ ಸೋಮವಾರ ಪ್ರಕಟವಾಗಲಿರುವ ಎಟಿಪಿ ಪುರುಷರ ಡಬಲ್ಸ್ ರ‌್ಯಾಂಕಿಂಗ್‌ನಲ್ಲಿ ಬೋಪಣ್ಣ ಮರಳಿ ಅಗ್ರಸ್ಥಾನಕ್ಕೇರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net