

ಕೊಚ್ಚಿ: ಒಲಿಂಪಿಯನ್ ಅಂಜು ಬಾಬಿ ಜಾರ್ಜ್, ಭಾರತ ಕಂಡ ಅತ್ಯುತ್ತಮ ಅಥ್ಲೀಟ್‌ಗಳಲ್ಲಿ ಒಬ್ಬರು. 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಈ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಅಂಜು ಬಾಬಿ ಜಾರ್ಜ್, ಅಂಥ ಸಾಧನೆ ಮಾಡುವಾಗಲೂ ಕೇವಲ ಒಂದು ಕಿಡ್ನಿ ಹೊಂದಿದ್ದೆ ಎಂದು ಬಹಿರಂಗ ಪಡಿಸಿದ್ದಾರೆ. ಈ ವೇಳೆ ಸಾಕಷ್ಟು ನೋವು ತಿಂದೆ, ನೋವನ್ನು ಕಡಿಮೆ ಮಾಡುವ ಔಷಧಿ ಸೇವಿಸಿಯೇ ಈ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಲಾಂಗ್‌ಜಂಪ್ ಪಟು ಅಂಜು ಬಾಬಿ ಜಾರ್ಜ್, ನಂಬಿದರೆ ನಂಬಿ, ಏಕೈಕ ಕಿಡ್ನಿಯಲ್ಲಿಯೇ ವಿಶ್ವದ ದೊಡ್ಡ ಕೂಟದಲ್ಲಿ ಪದಕ ಜಯಿಸಿದೆ. ಇದು ಕೋಚ್ ಮಾಡಿದ ಮ್ಯಾಜಿಕ್ ಅನ್ನಬೇಕೊ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅಂಜು ಬಾಬಿ ಜಾರ್ಜ್ ಅವರಿಗೆ ಅವರ ಪತಿ ರೊಬರ್ಟ್ ಬಾಬಿ ಜಾರ್ಜ್ ಅವರೇ ಕೋಚ್ ಆಗಿದ್ದರು. ಕರೊನಾ ವೈರಸ್ ಭೀತಿಯಿಂದಾಗಿ ಕೆಲ ತಿಂಗಳಿಂದ ಅಭ್ಯಾಸದಿಂದ ದೂರ ಉಳಿದಿರುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವ ದೃಷ್ಟಿಯಿಂದ ಅಂಜು ಬಾಬಿ ಜಾರ್ಜ್ ತಮ್ಮ ಬಹುದಿನಗಳ ಸಿಕ್ರೇಟ್‌ವೊಂದನ್ನು ಹೊರಹಾಕಿದ್ದಾರೆ. ನನ್ನನ್ನು ನೋಡಿದ ಜನ ನಾನು ಸಂಪೂರ್ಣ ಫಿಟ್ ಆಗಿದ್ದೇನೆ. ನನಗೆ ಉತ್ತಮ ದೈಹಿಕ ಸಾಮರ್ಥ್ಯ ಇದೆ ಎಂದುಕೊಳ್ಳುತ್ತಾರೆ. ಆದರೆ ಮೈದಾನದಲ್ಲಿ ನಾನು ಅನುಭವಿಸಿದ್ದು, ನನಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ. 2002ರ ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಕೇವಲ 20ದಿನಗಳು ಇರುವಾಗ ಜರ್ಮನಿಯ ವೈದ್ಯರೊಬ್ಬರು 6 ತಿಂಗಳ ಕಾಲ ವಿಶ್ರಾಂತಿ ಸೂಚಿಸಿದರು. ಆದರೆ, ನಾನು ಇದನ್ನು ಲೆಕ್ಕಿಸದೆ ಪ್ಯಾರಿಸ್ ವಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದೆ ಎಂದು ಅಂಜು ಹೇಳಿಕೊಂಡಿದ್ದಾರೆ.
2001ರಲ್ಲಿ ಬೆಂಗಳೂರಿಗೆ ಆರೋಗ್ಯ ತಪಾಸಣೆಗೆ ಬಂದಾಗಲೇ ನನಗೆ ಏಕೈಕ ಕಿಡ್ನಿ ಇರುವುದು ಗೊತ್ತಾಯಿತು ಎಂದು ಹೇಳಿದ್ದಾರೆ. ಈ ಸುದ್ದಿ ಕೇಳಿ ನನಗೆ ನಿಜಕ್ಕೂ ಶಾಕ್ ಆಯಿತು. ಈ ವೇಳೆ ನನ್ನ ಪತಿ ಬಾಬಿ ಧೈರ್ಯ ತುಂಬಿದರು. ವೃತ್ತಿಜೀವನದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು. ಒಂದು ವೇಳೆ ಸಮಸ್ಯೆ ಎದುರಿಸಿದರೆ ತನ್ನ ಕಿಡ್ನಿ ನೀಡುವುದಾಗಿ ಪತಿ ಭರವಸೆ ನೀಡಿದರು ಎಂದು ಅಂಜು ಹೇಳಿಕೊಂಡಿದ್ದಾರೆ. ಅಂಜು ಟ್ವೀಟ್‌ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಎಎಎಫ್ ವಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿದ ಏಕೈಕ ಭಾರತೀಯ ಅಥ್ಲೀಟ್ ಇವರಾಗಿದ್ದು, 2005ರಲ್ಲಿ ಮೊನಾಕೊದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಫೈನಲ್ಸ್‌ನಲ್ಲಿ ಸ್ವರ್ಣ ಗೆದ್ದಿದ್ದರು. ಅಲ್ಲದೆ, 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಅಂಜು ಬಾಬಿ ಜಾರ್ಜ್ 6ನೇ ಸ್ಥಾನ ಪಡೆದಿದ್ದರು. ಈ ಕೂಟದಲ್ಲಿ ವೈಯಕ್ತಿಕ ಶ್ರೇಷ್ಠ 6.83 ಮೀಟರ್ ಹಾರಿದ್ದರು. ಅಮೆರಿಕದ ಮರಿಯೊನ್ ಜಾನ್ಸ್ ಅನರ್ಹಗೊಂಡ ಹಿನ್ನೆಲೆಯಲ್ಲಿ 2007ರಲ್ಲಿ 5ನೇ ಸ್ಥಾನಕ್ಕೇರಿದ್ದರು. 2002ರ ಬುಸಾನ್ ಏಷ್ಯಾಡ್‌ನಲ್ಲಿ ಅಂಜು 6.53 ಮೀಟರ್ ಹಾರಿ ಸ್ವರ್ಣ ಗೆದ್ದಿದ್ದರು.