ಕನ್ನಡಿಗ ರಾಬಿನ್ ಉತ್ತಪ್ಪ ದಾರಿ ತಪ್ಪಿದ್ದೆಲ್ಲಿ?

robin_WEB
Published on

ಬೆಂಗಳೂರು: ಕೊಡಗಿನ ಕುವರ ರಾಬಿನ್ ಉತ್ತಪ್ಪ ಒಂದು ಕಾಲದಲ್ಲಿ ರಾಜ್ಯ ಕ್ರಿಕೆಟ್ ತಂಡದ ಆಧಾರ ಸ್ತಂಭ. ರಾಜ್ಯದ ಪರ ಆರಂಭಿಕನಾಗಿ ಹಲವಾರು ಇನಿಂಗ್ಸ್ ಕಟ್ಟಿರುವ ಉತ್ತಪ್ಪ ರಾಷ್ಟ್ರೀಯ ತಂಡದಲ್ಲಿ ಆಡಿದ್ದರೂ ಒಂದು ಕೊರತೆ ಕಾಡುತ್ತಿದೆ. ಅದೆಂದರೆ, ಕೆಲ ದಿನಗಳ ಕಾಲ ರಾಷ್ಟ್ರೀಯ ಏಕದಿನ ತಂಡದ ಕಾಯಂ ಸದಸ್ಯರಾಗಿದ್ದ ಉತ್ತಪ್ಪ ಟೆಸ್ಟ್ ಕ್ರಿಕೆಟ್ ಆಡದಿರುವುದು. ದಿಗ್ಗಜ ರಾಹುಲ್ ದ್ರಾವಿಡ್ ನಾಯಕತ್ವದಡಿ ರಾಷ್ಟ್ರೀಯ ತಂಡ ಪ್ರವೇಶಿಸಿದ್ದ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ 2007ರ ಚೊಚ್ಚಲ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ.

ಆಪತ್ತು ತಂದ ತಾಂತ್ರಿಕತೆ ಬದಲಾವಣೆ

ರಾಷ್ಟ್ರೀಯ ನಿಗದಿತ ನಿಗದಿತ ಓವರ್‌ಗಳಲ್ಲಿ ಆಡಿದರೂ ಟೆಸ್ಟ್ ಕ್ರಿಕೆಟ್‌ಗೆ ಆಡುವ ಹಂಬಲ ಪ್ರತಿಯೊಬ್ಬ ಕ್ರಿಕೆಟಿಗನಿಗೂ ಇದ್ದೇ ಇರುತ್ತದೆ. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿದ್ದ ಉತ್ತಪ್ಪ ಟೆಸ್ಟ್ ಕ್ರಿಕೆಟ್‌ಗಾಗಿ ಬ್ಯಾಟಿಂಗ್ ತಾಂತ್ರಿಕತೆ ಸಾಧಿಸಲು ಹೋಗಿ ಇದ್ದ ಚಾರ್ಮ್ ಕೂಡ ಕಳೆದುಕೊಂಡರು ಎಂಬುದು ಇತಿಹಾಸ. ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಸಲುವಾಗಿ ಮುಂಬೈ ಕೋಚ್ ಪ್ರವೀಣ್ ಆಮ್ರೆ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು. ಅದು ಏಕೋ ಕೈಗೂಡಲಿಲ್ಲ. 25ನೇ ವಯಸ್ಸಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಯತ್ನಿಸಿದೆ. ಆ ಪ್ರಯತ್ನವನ್ನು 20-21ನೇ ವಯಸ್ಸಿನಲ್ಲೇ ಮಾಡಬೇಕಿತ್ತು ಎನ್ನುತ್ತಾರೆ ಉತ್ತಪ್ಪ. ಐಪಿಎಲ್‌ನಲ್ಲಿ ಕೋಲ್ಕತ ನೈಟ್ ರೈಡರ್ಸ್‌ ತಂಡದ ಪರ ಆಡುತ್ತಿದ್ದ ಉತ್ತಪ್ಪ ಈ ವರ್ಷ ರಾಜಸ್ಥಾನ ರಾಯಲ್ಸ್ ತಂಡಕ್ಕೆ ವರ್ಗಾವಣೆಯಾಗಿದ್ದಾರೆ. 20ನೇ ವಯಸ್ಸಿಗೆ ಉತ್ತಪ್ಪ ರಾಷ್ಟ್ರೀಯ ಏಕದಿನ ತಂಡದಲ್ಲಿ ಆಡಿದ್ದರು.

ಧೋನಿಗೆ 2007ರ ವಿಶ್ವಕಪ್ ಕ್ರೆಡಿಟ್

2007ರ ಟಿ20 ವಿಶ್ವಕಪ್ ಟೂರ್ನಿಯ ಘಟನೆಯನ್ನು ಮೆಲುಕು ಹಾಕಿರುವ ಉತ್ತಪ್ಪ, ಪಾಕಿಸ್ತಾನ ವಿರುದ್ಧ ಲೀಗ್ ಪಂದ್ಯದಲ್ಲಿ ಬೌಲ್‌ಔಟ್ ಮೂಲಕ ಭಾರತ ಗೆಲುವು ದಾಖಲಿಸಿತ್ತು. ಈ ಗೆಲುವಿನ ಶ್ರೇಯ ನಾಯಕ ಧೋನಿ ಹಾಗೂ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್‌ಗೆ ಸಲ್ಲಬೇಕು ಎನ್ನುತ್ತಾರೆ. ಪಂದ್ಯ ಟೈಗೊಂಡ ಕಾರಣ ಲಿತಾಂಶಕ್ಕಾಗಿ ನಡೆದ ಬೌಲ್ ಔಟ್‌ನಲ್ಲಿ ರಾಬಿನ್ ಕೂಡ ಬೌಲ್ಡ್ ಮಾಡಿದ್ದರು. ಆ ಪಂದ್ಯದಲ್ಲಿ ರಾಬಿನ್ ಬಿರುಸಿನ ಅರ್ಧಶತಕ ಸಿಡಿಸಿದ್ದರು.

ತಪ್ಪಿದ ದಾಖಲೆ ನಿರ್ಮಿಸುವ ಅವಕಾಶ

2006ರಲ್ಲಿ ಸ್ವದೇಶದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಉತ್ತಪ್ಪ ಮೊದಲ ಪಂದ್ಯದಲ್ಲಿಯೇ 86 ರನ್ ಸಿಡಿಸಿದ್ದರು. ಒಂದು ವೇಳೆ ಶತಕ ಸಿಡಿಸಿದ್ದರೆ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಉತ್ತಪ್ಪ ಕಡೆಯ ಬಾರಿಗೆ 2015ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ರಾಷ್ಟ್ರೀಯ ತಂಡದ ಪರ ಆಡಿದ್ದರು. 46 ಏಕದಿನ ಪಂದ್ಯಗಳಿಂದ 6 ಅರ್ಧಶತಕ ಸೇರಿದಂತೆ 1031 ರನ್ ಗಳಿಸಿದ್ದರೆ, 13 ಟಿ20 ಪಂದ್ಯಗಳಿಂದ 1 ಅಧಶತಕ ಒಳಗೊಂಡಂತೆ 249 ರನ್ ಬಾರಿಸಿದ್ದಾರೆ.

ತವರು ತಂಡವನ್ನೇ ತೊರೆದ ಉತ್ತಪ್ಪ

2013-14, 2014-15ನೇ ಸಾಲಿನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ (ರಣಜಿ, ವಿಜಯ್ ಹಜಾರೆ, ಇರಾನಿ) ವಿಜೇತ ಕರ್ನಾಟಕ ತಂಡದ ಸದಸ್ಯರಾಗಿದ್ದರು. ರಾಜ್ಯದಲ್ಲಿ ಹೆಚ್ಚಿದ ಪೈಪೋಟಿಯಿಂದಾಗಿ ಸೌರಾಷ್ಟ್ರಕ್ಕೆ ವಲಸೆ ಹೋದರು. ಬಳಿಕ ಕಳೆದ ದೇಶೀಯ ಕ್ರಿಕೆಟ್ ಆವೃತ್ತಿಯಲ್ಲಿ ಕೇರಳ ತಂಡ ಸೇರ್ಪಡೆಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net