ಐಸಿಸಿ ಟಿ20 ರ‍್ಯಾಂಕಿಂಗ್​ನಲ್ಲಿ ಭಾರಿ ಪ್ರಗತಿ ಕಂಡ ಅಭಿಷೇಕ್​ ಶರ್ಮ, ವರುಣ್ ಚಕ್ರವರ್ತಿ!

web icc rank
Published on

ದುಬೈ: ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಚುಟುಕು ಕ್ರಿಕೆಟ್​ ಸರಣಿಯಲ್ಲಿ ಮಿಂಚಿದ ಭಾರತದ ಆರಂಭಿಕ ಅಭಿಷೇಕ್​ ಶರ್ಮ ಮತ್ತು ಸ್ಪಿನ್ನರ್​ ವರುಣ್​ ಚಕ್ರವರ್ತಿ ಐಸಿಸಿ ಟಿ20 ರ‍್ಯಾಂಕಿಂಗ್​ನಲ್ಲಿ ಕ್ರಮವಾಗಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಭಿಷೇಕ್​ ಬರೋಬ್ಬರಿ 38 ಸ್ಥಾನ ಬಡ್ತಿ ಕಾಣುವ ಮೂಲಕ ಈಗ ಟಿ20 ಕ್ರಿಕೆಟ್​ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಟರ್​ ಎನಿಸಿದ್ದಾರೆ. 3 ಸ್ಥಾನ ಬಡ್ತಿ ಪಡೆದಿರುವ ವರುಣ್​ ಚಕ್ರವರ್ತಿ ಇಂಗ್ಲೆಂಡ್​ನ ಆದಿಲ್​ ರಶೀದ್​ ಜತೆಗೆ 2ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಆಸ್ಟ್ರೆಲಿಯಾದ ಟ್ರಾವಿಸ್​ ಹೆಡ್​ ಮತ್ತು ವೆಸ್ಟ್​ ಇಂಡೀಸ್​ನ ಅಕೀಲ್​ ಹೊಸೈನ್​ ಕ್ರಮವಾಗಿ ಬ್ಯಾಟಿಂಗ್​ ಮತ್ತು ಬೌಲಿಂಗ್​  ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಲ್ರೌಂಡರ್ಸ್​  ರ‍್ಯಾಂಕಿಂಗ್​​ನಲ್ಲಿ ಹಾರ್ದಿಕ್​ ಪಾಂಡ್ಯ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ತಂಡ  ರ‍್ಯಾಂಕಿಂಗ್​ನಲ್ಲಿ ಭಾರತವೂ ವಿಶ್ವ ನಂ. 1 ಪಟ್ಟದಲ್ಲಿ ಮುಂದುವರಿದಿದೆ.

24 ವರ್ಷದ ಅಭಿಷೇಕ್​ ಸರಣಿಯಲ್ಲಿ ಆಡಿದ 5 ಇನಿಂಗ್ಸ್​ಗಳಲ್ಲಿ 22 ಸಿಕ್ಸರ್​, 24 ಬೌಂಡರಿಗಳ ಸಹಿತ 279 ರನ್​ ಬಾರಿಸಿದ್ದರು. ಸರಣಿಯಲ್ಲಿ 3 ವಿಕೆಟ್​ ಕೂಡ ಕಬಳಿಸಿದ್ದ ಅಭಿಷೇಕ್​ ಆಲ್ರೌಂಡರ್ಸ್  ರ‍್ಯಾಂಕಿಂಗ್​​ನಲ್ಲಿ 31 ಸ್ಥಾನ ಬಡ್ತಿಯೊಂದಿಗೆ 13ನೇ ಸ್ಥಾನಕ್ಕೇರಿದ್ದಾರೆ.

ಅಭಿಷೇಕ್​ ಹೊರತಾಗಿ ಭಾರತದ ಇತರ ಪ್ರಮುಖ ಬ್ಯಾಟರ್​ಗಳು  ರ‍್ಯಾಂಕಿಂಗ್​​ನಲ್ಲಿ ಕುಸಿತ ಕಂಡಿದ್ದಾರೆ. ಇದುವರೆಗೆ ಟಿ20ಯಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಟರ್​ ಆಗಿದ್ದ ತಿಲಕ್​ ವರ್ಮ ಇದೀಗ 2ರಿಂದ 3ನೇ ಸ್ಥಾನಕ್ಕೆ ಕುಸಿದಿದ್ದರೆ, ನಾಯಕ ಸೂರ್ಯಕುಮಾರ್​ ಯಾದವ್​ 5ನೇ ಸ್ಥಾನಕ್ಕಿಳಿದಿದ್ದಾರೆ. ಯಶಸ್ವಿ ಜೈಸ್ವಾಲ್​ 12ನೇ ಸ್ಥಾನಕ್ಕಿಳಿದಿದ್ದಾರೆ. ಸಂಜು ಸ್ಯಾಮ್ಸನ್​ 5 ಸ್ಥಾನ ಕುಸಿದು 34ನೇ ಸ್ಥಾನಕ್ಕಿಳಿದಿದ್ದಾರೆ. ಬೌಲರ್​ಗಳಲ್ಲಿ ಮತ್ತೋರ್ವ ಸ್ಪಿನ್ನರ್​ ರವಿ ಬಿಷ್ಣೋಯಿ 4 ಸ್ಥಾನ ಬಡ್ತಿಯೊಂದಿಗೆ 6ನೇ ಸ್ಥಾನಕ್ಕೇರಿದ್ದರೆ, ಅರ್ಷದೀಪ್​ 1 ಸ್ಥಾನ ಕುಸಿದು 9ನೇ ಸ್ಥಾನಕ್ಕಿಳಿದಿದ್ದಾರೆ. ಅಕ್ಷರ್​ ಪಟೇಲ್​ 13ನೇ ಸ್ಥಾನಕ್ಕಿಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net