ಜಿಂಬಾಬ್ವೆ ವಿರುದ್ಧ ಭರ್ಜರಿ ಶತಕ ಸಿಡಿಸಿ ಹಲವು ದಾಖಲೆ ಬರೆದ ಅಭಿಷೇಕ್​ ಶರ್ಮ! ಇಲ್ಲಿದೆ ವಿವರ...

web abhishek
Published on

ಹರಾರೆ: ಮೊದಲ ಟಿ20 ಪಂದ್ಯದ ಸೋಲಿಗೆ ಭಾರತದ ಯುವ ತಂಡ 2ನೇ ಪಂದ್ಯದಲ್ಲಿ ದಿಟ್ಟ ತಿರುಗೇಟು ನೀಡಿದೆ. ಪಂಜಾಬ್​ನ ಯುವ ಎಡಗೈ ಆರಂಭಿಕ ಅಭಿಷೇಕ್​ ಶರ್ಮ (100 ರನ್​, 47 ಎಸೆತ, 7 ಬೌಂಡರಿ, 8 ಸಿಕ್ಸರ್​) ಬಿರುಸಿನ ಶತಕದೊಂದಿಗೆ ಭಾರತ ತಂಡ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ ಭರ್ತಿ 100 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಇದೇ ವೇಳೆ 23 ವರ್ಷದ ಅಭಿಷೇಕ್​ ಶರ್ಮ ಹಲವು ದಾಖಲೆಗಳನ್ನು ಬರೆದರು.

ನಾಯಕ ಶುಭಮಾನ್​ ಗಿಲ್​ (2) ವಿಕೆಟ್​ ಬೇಗನೆ ಕಬಳಿಸುವ ಮೂಲಕ ಜಿಂಬಾಬ್ವೆ ತಂಡ ಭಾರತಕ್ಕೆ ಆರಂಭಿಕ ಆಘಾತ ನೀಡಿತು. ಆಗ ಅಭಿಷೇಕ್​ ಶರ್ಮ ಭಾರತಕ್ಕೆ ಆಸರೆಯಾಗಿ ನಿಂತು, ಋತುರಾಜ್​ ಗಾಯಕ್ವಾಡ್​ (77*ರನ್​, 47 ಎಸೆತ, 11 ಬೌಂಡರಿ, 1 ಸಿಕ್ಸರ್​) ಜತೆ 2ನೇ ವಿಕೆಟ್​ಗೆ 76 ಎಸೆತಗಳಲ್ಲಿ 137 ರನ್​ ಕಸಿಯುವ ಮೂಲಕ ಜಿಂಬಾಬ್ವೆಗೆ ದಿಟ್ಟ ತಿರುಗೇಟು ನೀಡಿದರು. ಈ ಜೋಡಿ ಆರಂಭದಲ್ಲಿ ನಿಧಾಗತಿಯಲ್ಲಿ ಆಡಿದ್ದರಿಂದ ಭಾರತ ಪವರ್​ಪ್ಲೇನಲ್ಲಿ 36 ರನ್​ ಮಾತ್ರ ಗಳಿಸಿತ್ತು. ಪದಾರ್ಪಣೆಯ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಅಭಿಷೇಕ್​ ಅದರಿಂದ ದೃತಿಗೆಡದೆ ಈ ಸಲ ಎದುರಿಸಿದ ಮೊದಲ ಕ್ರಮಬದ್ಧ ಎಸೆತದಲ್ಲೇ ಸಿಕ್ಸರ್​ ಸಿಡಿಸಿದರು. ಪವರ್​ಪ್ಲೇ ನಂತರ ರನ್​ಗತಿ ಏರಿಸಲು ಯತ್ನಿಸಿದ ಅಭಿಷೇಕ್​, ಡಿಯೋನ್​ ಮೈಯರ್ಸ್​ ಎಸೆದ ಪಂದ್ಯದ 11ನೇ ಓವರ್​ನಲ್ಲಿ 28 ರನ್​ (2ವೈಡ್​, 2, 4,6, 4, 6, 4) ಸಿಡಿಸಿದರು. ಈ ಮೂಲಕ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್​, ಮುಂದಿನ 50 ರನ್​ಗಳನ್ನು 13 ಎಸೆತಗಳಲ್ಲೇ ಕಸಿಯುವ ಮೂಲಕ 46 ಎಸೆತಗಳಲ್ಲೇ ಶತಕ ಪೂರೈಸಿದರು. ವೆಲ್ಲಿಂಗ್ಟನ್​ ಮಸಕಜ ಎಸೆದ ಪಂದ್ಯದ 14ನೇ ಓವರ್​ನಲ್ಲಿ ಹ್ಯಾಟ್ರಿಕ್​ ಸಿಕ್ಸರ್​ ಸಿಡಿಸುವ ಮೂಲಕ ಅಭಿಷೇಕ್​ ಶತಕ ಪೂರೈಸಿದರು ಮತ್ತು ಮರುಎಸೆತದಲ್ಲೇ ಔಟಾದರು.

1: ಅಭಿಷೇಕ್​ ಶರ್ಮ ಟಿ20 ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್​ ಸಿಕ್ಸರ್​ ಮೂಲಕ ಶತಕ ಪೂರೈಸಿದ ಮೊದಲ ಬ್ಯಾಟರ್​ ಎನಿಸಿದರು.

46: ಅಭಿಷೇಕ್​ ಶರ್ಮ (46 ಎಸೆತ) ಟಿ20 ಕ್ರಿಕೆಟ್​ನಲ್ಲಿ ಭಾರತದ 3ನೇ ಅತಿವೇಗದ ಶತಕವೀರ ಎನಿಸಿದರು. ರೋಹಿತ್​ ಶರ್ಮ (35 ಎಸೆತ), ಸೂರ್ಯಕುಮಾರ್​ (45 ಎಸೆತ) ಮೊದಲೆರಡು ಸ್ಥಾನದಲ್ಲಿದ್ದಾರೆ. ಕೆಎಲ್​ ರಾಹುಲ್​ ಕೂಡ 46 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

2: ಅಭಿಷೇಕ್​ ಶರ್ಮ ಟಿ20 ಕ್ರಿಕೆಟ್​ನ ಮೊದಲ 2 ಇನಿಂಗ್ಸ್​ಗಳಲ್ಲಿ ಶೂನ್ಯ&ಶತಕ ಗಳಿಸಿದ ವಿಶ್ವದ 2ನೇ ಬ್ಯಾಟರ್​ ಎನಿಸಿದರು. ವೆಸ್ಟ್​ ಇಂಡೀಸ್​ನ ಇವಿನ್​ ಲೆವಿಸ್​ ಮೊದಲಿಗ.

4: 23 ವರ್ಷ, 307 ದಿನ ವಯಸ್ಸಿನ ಅಭಿಷೇಕ್​ ಶರ್ಮ ಟಿ20ಯಲ್ಲಿ ಭಾರತದ 4ನೇ ಅತಿಕಿರಿಯ ಶತಕವೀರ ಎನಿಸಿದರು. ಯಶಸ್ವಿ ಜೈಸ್ವಾಲ್​ (21 ವರ್ಷ, 279 ದಿನ) ಮೊದಲ ಸ್ಥಾನದಲ್ಲಿದ್ದಾರೆ.

2: ಅಭಿಷೇಕ್​ ಶರ್ಮ ಟಿ20 ಕ್ರಿಕೆಟ್​ನಲ್ಲಿ ಅತಿ ಕಡಿಮೆ ಇನಿಂಗ್ಸ್​ಗಳಲ್ಲಿ ಶತಕ ಸಿಡಿಸಿದ ಭಾರತೀಯ ಎನಿಸಿದರು. ದೀಪಕ್​ ಹೂಡಾ 3ನೇ ಇನಿಂಗ್ಸ್​ನಲ್ಲಿ ಶತಕ ಸಿಡಿಸಿದ್ದು ಹಿಂದಿನ ಕನಿಷ್ಠ.

10: ಅಭಿಷೇಕ್​ ಶರ್ಮ ಟಿ20ಯಲ್ಲಿ ಭಾರತದ 10ನೇ ಶತಕವೀರ ಎನಿಸಿದರು. ಜಿಂಬಾಬ್ವೆ ವಿರುದ್ಧ ಟಿ20ಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net