Vijay Hazare Trophy 2025: ಎಂಟರ ಘಟ್ಟಕ್ಕೆ ಹರಿಯಾಣ, ರಾಜಸ್ಥಾನ: ಒಂದೇ ಓವರ್‌ನಲ್ಲಿ ಏಳು ಬೌಂಡರಿ!

New Project (1)
Published on

ವಡೋದರ: ಸರ್ವಾಂಗೀಣ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಹರಿಯಾಣ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯ ಕ್ವಾರ್ಟರ್‌ೈನಲ್‌ಗೇರಿದೆ. ನಿಶಾಂತ್ ಸಿಂಧು (64 ರನ್, 67 ಎಸೆತ, 6 ಬೌಂಡರಿ, 1 ಸಿಕ್ಸರ್ ಹಾಗೂ 36ಕ್ಕೆ 2 ವಿಕೆಟ್) ಅರ್ಧಶತಕ ಹಾಗೂ ಪಾರ್ಥ್ ವತ್ಸ (62 ರನ್, 77 ಎಸೆತ, 6 ಬೌಂಡರಿ ಹಾಗೂ 33ಕ್ಕೆ 3 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಹರಿಯಾಣ ತಂಡ ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ ಬಂಗಾಳ ಎದುರು 72 ರನ್‌ಗಳ ಬೃಹತ್ ಗೆಲುವು ದಾಖಲಿಸಿತು. ಹರಿಯಾಣ ಕ್ವಾರ್ಟರ್‌ೈನಲ್‌ನಲ್ಲಿ ಗುಜರಾತ್ ಎದುರು ಆಡಲಿದೆ.

ಮೋತಿಬಾಗ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಹರಿಯಾಣ, ವೇಗಿ ಮೊಹಮದ್ ಶಮಿ (61ಕ್ಕೆ 3) ದಾಳಿಯ ನಡುವೆಯೂ 9 ವಿಕೆಟ್‌ಗೆ 298 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಅಭಿಷೇಕ್ ಪೊರೆಲ್ (57 ರನ್, 78 ಎಸೆತ, 6 ಬೌಂಡರಿ) ಪ್ರತಿರೋಧದ ನಡುವೆಯೂ ಬಂಗಾಳ 43.1 ಓವರ್‌ಗಳಲ್ಲಿ 226 ರನ್‌ಗಳಿಗೆ ಸರ್ವಪತನ ಕಂಡಿತು.

ಹರಿಯಾಣ: 9 ವಿಕೆಟ್‌ಗೆ 298 (ಅರ್ಶ್ ರಂಗ 23, ಅಂಕೀತ್ 18, ಪಾರ್ಥ್ 62, ನಿಶಾಂತ್ 64, ತೆವಾಟಿಯಾ 29, ಎಸ್‌ಪಿ ಕುಮಾರ್ 41*, ಶಮಿ 61ಕ್ಕೆ 3, ಮುಕೇಶ್ 46ಕ್ಕೆ 2). ಬಂಗಾಳ: 43.1 ಓವರ್‌ಗಳಲ್ಲಿ 226 (ಅಭಿಷೇಕ್ 57, ಸುದೀಪ್ 36, ಅನೂಸ್ಥೂಪ್ 36, ಕರಣ್ 28, ಮುಕೇಶ್ 13*, ಪಾರ್ಥ್ 33ಕ್ಕೆ 3, ಅಂಶುಲ್ 25ಕ್ಕೆ 2).

ಅಭಿಜೀತ್ ಶತಕ, ತ.ನಾಡಿಗೆ ಶಾಕ್

ಆರಂಭಿಕ ಅಭಿಜೀತ್ ತೋಮರ್ (111 ರನ್, 125 ಎಸೆತ,12 ಬೌಂಡರಿ, 4 ಸಿಕ್ಸರ್) ಶತಕದ ನೆರವಿನಿಂದ ರಾಜಸ್ಥಾನ ತಂಡ ಎರಡನೇ ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ ಐದು ಬಾರಿ ಚಾಂಪಿಯನ್ ತಮಿಳುನಾಡು ಎದುರು 19 ರನ್‌ಗಳ ರೋಚಕ ಗೆಲುವು ಒಲಿಸಿಕೊಂಡಿದೆ. ರಾಜಸ್ಥಾನ ಇನ್ನು ಎಂಟರ ಘಟ್ಟದಲ್ಲಿ ವಿದರ್ಭ ವಿರುದ್ಧ ಸೆಣಸಲಿದೆ.

ನೂತನ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ರಾಜಸ್ಥಾನ ಬ್ಯಾಟಿಂಗ್‌ಗೆ ಇಳಿಯಿತು. ಅಭಜೀತ್ ಹಾಗೂ ನಾಯಕ ಮಹಿಪಾಲ್ ಲೋಮ್ರೊರ್ (60 ರನ್, 49 ಎಸೆತ, 3 ಬೌಂಡರಿ, 4 ಸಿಕ್ಸರ್) ಜತೆಯಾಟದ ನಡುವೆಯೂ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (52ಕ್ಕೆ 5) ದಾಳಿಗೆ ಸಿಲುಕಿ 47.3 ಓವರ್‌ಗಳಲ್ಲಿ 267 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ನಿರಂತರ ವಿಕೆಟ್ ಕಳದುಕೊಂಡ ತಮಿಳುನಾಡು, ಎನ್.ಜಗದೀಶನ್ (65 ರನ್, 62 ಎಸೆತ, 10 ಬೌಂಡರಿ) ಏಕಾಂಗಿ ಹೋರಾಟದ ಹೊರತಾಗಿಯೂ 47.1 ಓವರ್‌ಗಳಲ್ಲಿ 248 ರನ್‌ಗಳಿಗೆ ಸರ್ವಪತನ ಕಂಡಿತು.

ರಾಜಸ್ಥಾನ: 47.3 ಓವರ್‌ಗಳಲ್ಲಿ 267 (ಅಭಿಜೀತ್ 111, ಮಹಿಪಾಲ್ 60,ಕಾರ್ತಿಕ್ 35, ಜೋಶಿ 15, ಚಕ್ರವರ್ತಿ 52ಕ್ಕೆ 5, ಸಂದೀಪ್ 38ಕ್ಕೆ 2). ತಮಿಳುನಾಡು: 47.1 ಓವರ್‌ಗಳಲ್ಲಿ 248 (ತುಷಾರ್ 11, ಜಗದೀಶನ್ 65, ಇಂದ್ರಜೀತ್ 37, ವಿಜಯ್ ಶಂಕರ್ 49, ಮೊಹಮದ್ 34, ಅಮನ್ ಸಿಂಗ್ 60ಕ್ಕೆ 3, ಚೌಧರಿ 40ಕ್ಕೆ 25).

ಒಂದೇ ಓವರ್‌ನಲ್ಲಿ ಏಳು ಬೌಂಡರಿ!

ತಮಿಳುನಾಡು ತಂಡದ ಎನ್.ಜಗದೀಶನ್ ಒಂದೇ ಓವರ್‌ನಲ್ಲಿ ಸತತ ಆರು ಬೌಂಡರಿ ಸಿಡಿಸಿದರು. 268 ರನ್‌ಗಳ ಚೇಸಿಂಗ್‌ಗೆ ಇಳಿದ ಜಗದೀಶನ್, ಅಮನ್ ಸಿಂಗ್ ಶೆಖಾವತ್ ಎಸೆದ ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಈ ಸಾಧನೆ ಮಾಡಿದರು. ಅಮನ್ ಎಸೆದ ಮೊದಲ ಎಸೆತ ವೈಡ್ ಆಗಿ ಬೌಂಡರಿ ಗೆರೆ ದಾಟಿದರೆ, ನಂತರ ಎಸೆತಗಳಲ್ಲಿ ಜಗದೀಶನ್ 6 ಬೌಂಡರಿಸ ಸಿಡಿಸಿ ಒಟ್ಟಾರೆ 29 ರನ್ ಕಸಿದರು. ಈ ಮೂಲಕ ಅಮನ್ ಸಿಂಗ್ ಒಂದೇ ಓವರ್‌ನಲ್ಲಿ ಗರಿಷ್ಠ ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಅನಪೇಕ್ಷಿತ ದಾಖಲೆಗೆ ಪಾತ್ರರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net