ಇತಿಹಾಸದ ಸೃಷ್ಟಿಸಿದ ಎಬಿ ಡಿವಿಲಿಯರ್ಸ್​: ವಿಶ್ವದಲ್ಲೇ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ! AB De Villiers

AB De Villiers
Published on

AB De Villiers : ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ತಮ್ಮ ವಿನಾಶಕಾರಿ ಬ್ಯಾಟಿಂಗ್​ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 41ನೇ ವಯಸ್ಸಿನಲ್ಲಿ ಬಿರುಗಾಳಿಯ ಇನ್ನಿಂಗ್ಸ್ ಮೂಲಕ ಎದುರಾಳಿ ಬೌಲರ್‌ಗಳ ಬೆವರಿಸಿದ್ದಾರೆ. ಕ್ರೀಸ್‌ಗೆ ಬಂದ ಕ್ಷಣದಿಂದಲೇ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವ ಮೂಲಕ ಕೇವಲ 41 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಒಟ್ಟು 51 ಎಸೆತಗಳಲ್ಲಿ 116 ರನ್ ಗಳಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು 41ನೇ ವಯಸ್ಸಿನಲ್ಲಿ ಎಂಥಾ ಅದ್ಭುತ ಆಟ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

2025ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (ಡಬ್ಲ್ಯೂಸಿಎಲ್) ಭಾಗವಾಗಿ ಗುರುವಾರ (ಜುಲೈ 24) ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಮತ್ತು ಇಂಗ್ಲೆಂಡ್ ಚಾಂಪಿಯನ್ಸ್ ನಡುವಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಇಂಗ್ಲೆಂಡ್ ಚಾಂಪಿಯನ್ಸ್ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ತಂಡವು ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 152 ರನ್ ಗಳಿಸಿತು.

153 ರನ್‌ಗಳ ಗುರಿಯೊಂದಿಗೆ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಬ್ಯಾಟಿಂಗ್ ಪ್ರಾರಂಭಿಸಿತು. ಆರಂಭಿಕರಾಗಿ ಕ್ರೀಸ್‌ಗೆ ಬಂದ ಎಬಿ ಡಿವಿಲಿಯರ್ಸ್ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಸಿಕ್ಸರ್ ಮತ್ತು ಬೌಂಡರಿಗಳನ್ನು ಸುರಿಮಳೆಗೈದರು. ಹಾಶಿಮ್ ಆಮ್ಲ ಜೊತೆ ಕ್ರೀಸ್‌ಗೆ ಬಂದ ಎಬಿಡಿ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದರು. ಕೇವಲ 41 ಎಸೆತಗಳಲ್ಲಿ ಬಿರುಗಾಳಿಯ ಇನ್ನಿಂಗ್ಸ್ ಮೂಲಕ ತಮ್ಮ ಶತಕವನ್ನು ಪೂರೈಸಿದರು. ಅವರು 51 ಎಸೆತಗಳಲ್ಲಿ 116 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರಲ್ಲಿ 15 ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳು ಸೇರಿವೆ.

ಕ್ರೀಸ್​ನಲ್ಲಿ ಡಿವಿಲಿಯರ್ಸ್ ಬೌಂಡರಿಗಳ ಸುರಿಮಳೆ ಸುರಿಸುತ್ತಿದ್ದರೆ ನಾನ್​ ಸ್ಟ್ರೈಕರ್​ನಲ್ಲಿ ಹಾಶಿಮ್ ಆಮ್ಲ ನೋಡುತ್ತಾ ಎಂಜಾಯ್​ ಮಾಡುತ್ತಿದ್ದರು. ಆಮ್ಲ ಅವರು 25 ಎಸೆತಗಳಲ್ಲಿ 29 ರನ್ ಗಳಿಸಿ ಅಜೇಯರಾಗಿ ಉಳಿದರು. ಎಬಿ ಡಿವಿಲಿಯರ್ಸ್ ಅಬ್ಬರದಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ಚಾಂಪಿಯನ್‌ಗಳು ಕೇವಲ 12.3 ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ಕಳೆದುಕೊಳ್ಳದೆ ಜಯಗಳಿಸಿತು.

ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಎಬಿ ಡಿವಿಲಿಯರ್ಸ್

ಡಿವಿಲಿಯರ್ಸ್ ಕೇವಲ 41 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಅತ್ಯಂತ ವೇಗದ ಶತಕವಾಗಿದೆ. ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿದ ಆಸ್ಟ್ರೇಲಿಯಾದ ಬೆನ್ ಡಂಕ್ ಅವರ ಹೆಸರಿನಲ್ಲಿ ಅತಿ ವೇಗದ ಶತಕದ ದಾಖಲೆ ಇದೆ. ಈ ಲೀಗ್‌ನಲ್ಲಿ ಶತಕ ಗಳಿಸಿದ ಮೂರನೇ ಆಟಗಾರ ಡಿವಿಲಿಯರ್ಸ್. ಈ ಪಟ್ಟಿಯಲ್ಲಿ ಎರಡನೇ ಆಟಗಾರ ದಕ್ಷಿಣ ಆಫ್ರಿಕಾದ ಸರೆಲ್ ಎರ್ವೀ ಇದಾರೆ. ಇದೇ ಸಂದರ್ಭದಲ್ಲಿ ಡಿವಿಲಿಯರ್ಸ್ WCL ಇತಿಹಾಸದಲ್ಲೇ ಶತಕ ಗಳಿಸಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಅವರು 41 ವರ್ಷ 157 ದಿನಗಳಲ್ಲಿ ಶತಕ ಗಳಿಸಿದ್ದಾರೆ. ಬೆನ್ ಡಂಕ್ ಅವರು 37 ವರ್ಷಗಳು, 121 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಅಂದಹಾಗೆ, ಮೂರು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ WCL ನ ಫೈನಲ್‌ಗೆ ತಮ್ಮ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ. ಜುಲೈ 25 ರಂದು ಲೀಸೆಸ್ಟರ್‌ನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಮತ್ತು ಜುಲೈ 27 ರಂದು ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ಆಡಲಿದ್ದಾರೆ. ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸಿದರೆ ಫೈನಲ್‌ನಲ್ಲಿ ಅವರ ಸ್ಥಾನ ದೃಢವಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net