ಆರ್​ಸಿಬಿಗೆ ಈತ ನಾಯಕನಾಗುವುದು ಫಿಕ್ಸ್​; ಆದರೆ ತಂಡದಲ್ಲಿ ಈ ಕೊರತೆ ಮಾತ್ರ ಕಾಡುತ್ತಿದೆ: AB de Villiers

ab de villiers
Published on

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ (IPL) ಆರಂಭವಾಗುವುದಲ್ಲೆ ಹಲವು ತಿಂಗಳುಗಳು ಬಾಕಿ ಉಳಿದಿದ್ದು, ಒಂದಿಲ್ಲೊಂದು ಕಾರಣಕ್ಕೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ. ನವೆಂಬರ್​ 24-25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಮೆಗಾ ಹರಾಜು (Mega Auction) ಪ್ರಕ್ರಿಯೆಯಲ್ಲಿ 62 ವಿದೇಶಿಯರು ಸೇರಿದಂತೆ ಒಟ್ಟು 182 ಮಂದಿ ಆಟಗಾರರು ತಂಡಗಳಿಗೆ ಮಾರಾಟವಾಗಿದ್ದು,  10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದ್ದು, ಒಟ್ಟು 8 ಆರ್​ಟಿಮ್​ ಬಳಕೆ ಮಾಡಲಾಗಿದೆ. ಎಲ್ಲಾ ತಂಡಗಳು ಬಲಿಷ್ಠ  ಪಡೆಯನ್ನು ಕಟ್ಟಿಕೊಂಡು ಸಜ್ಜಾಗುತ್ತಿದ್ದು, ಬಹುತೇಕ ಫ್ರಾಂಚೈಸಿಗಳು ನೂತನ ತಂಡವನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅವುಗಳಲ್ಲಿ ಆರ್​ಸಿಬಿ (RCB) ಕೂಡ ಒಂದಾಗಿದೆ.

ಈ ಬಾರಿಯ ಟೂರ್ನಿಯಲ್ಲಿ ಹೊಸತನದೊಂದಿಗೆ ಕಣಕ್ಕಿಳಿಯುತ್ತಿರುವ ಆರ್​ಸಿಬಿ (RCB) ಎರಡು ದಿನಗಳ ಕಾಲ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 19 ಆಟಗಾರರನ್ನು ಖರೀದಿಸಿತ್ತು. 7 ವರ್ಷ ಆಡಿದ್ದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj), ಮಾಜಿ ನಾಯಕ ಫಾಫ್​ ಡು ಪ್ಲೆಸ್ಸಿಸ್​​ (Faf Du Plessis) ಸೇರಿದಂತೆ ಹಲವರಿಗೆ ಗೇಟ್​ಪಾಸ್​ ನೀಡಲಾಗಿದ್ದು, 18ನೇ ಆವೃತ್ತಿಯಲ್ಲಿ ಬಲಿಷ್ಠ ತಂಡ ಕಟ್ಟುವ ಮುನ್ಸೂಚನೆಯನ್ನು ಫ್ರಾಂಚೈಸಿ ನೀಡಿದೆ. ಆದರೆ, ಅಭಿಮಾನಿಗಳು ಫ್ರಾಂಚೈಸಿಯ ನಡೆಗೆ ಕಿಡಿಕಾರುತ್ತಿದ್ದು, ಕ್ರೀಡಾ ಪಂಡಿತರು ಆರ್​ಸಿಬಿಯ ಚಾಣಾಕ್ಷ ನಡೆಯನ್ನು ಹಾಡಿಹೊಗಳುತ್ತಿದ್ದಾರೆ. ಅದರಲ್ಲಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್​ (AB De Villiers) ಕೂಡ ಒಬ್ಬರಾಗಿದ್ಧಾರೆ. 

RCB

ಈ ಬಗ್ಗೆ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿರುವ ಎಬಿಡಿ (AB De Villiers), ಈ ಬಾರಿಯ ತಂಡವನ್ನು ನೋಡಿದರೆ ನನ್ನ ಪ್ರಕಾರ ಆರ್​ಸಿಬಿಯ ಮುಂದಿನ ನಾಯಕರಾಗಿ ವಿರಾಟ್​ ಆಗಲಿದ್ದಾರೆ. ಇದಲ್ಲದೆ ಹರಾಜಿನ ವೇಳೆ ಕೆಲವು ನ್ಯೂನತೆಗಳು ನಡೆದಿದ್ದು, ನಾವು ಹಲವು ಅವಕಾಶಗಳನ್ನು ಕೆಳದುಕೊಂಡಿದ್ದೇವೆ. ಮೆಗಾ ಹರಾಜಿನಲ್ಲಿ ನಾವು ರಬಾಡ ಅವರನ್ನು ಖರೀದಿಸಬಹುದಿತ್ತು, ಆದರೆ ಅದು ಆಗಲಿಲ್ಲ ಆದರೆ ನಮಗೆ ಲುಂಗಿ ಎನ್ಗಿಡಿ ಸಿಕ್ಕಿದ್ದಾರೆ. ಇದರ ಹೊರತಾಗಿ ನಾವು ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಿದ್ದೇವೆ. ಜೋಶ್ ಹೇಜಲ್​ವುಡ್​ರನ್ನು ಖರೀದಿಸಿರುವುದು ನನಗೆ ತುಂಬಾ ಖುಷಿಯಾಗಿದೆ.

ಹಾಗೆಯೇ ನಾವು ಹರಾಜಿನಲ್ಲಿ ಆರ್​. ಅಶ್ವಿನ್​ರನ್ನು ಖರೀದಿಸಬಹುದಿತ್ತು. ತಂಡದಲ್ಲಿ ಪ್ರಮುಖ ಸ್ಪಿನ್ನರ್​ ಒಬ್ಬರು ಇಲ್ಲದೇ ಇರುವುದು ಕೊಂಚ ಹಿನ್ನಡೆಯಾಗಬಹುದು. ಎರಡೂ ಕಡೆ ಚೆಂಡನ್ನು ಸ್ಪಿನ್ ಮಾಡುವ ಸ್ಪಿನ್ನರ್​ನ ಅಗತ್ಯತೆ ನಮಗಿತ್ತು. ಆದರೆ ಅಂತಹ ಸ್ಪಿನ್ನರ್​ ಅನ್ನು ಖರೀದಿಸಲು ಸಾಧ್ಯವಾಗಿಲ್ಲ. ಉಳಿದಂತೆ ಸಮತೋಲಿತ ತಂಡದಂತೆ ಕಾಣುತ್ತದೆ. ಹರಾಜಿನ ವಿಚಾರಕ್ಕೆ ಬರುವುದಾದರೆ ನನಗೆ ತುಂಬಾ ಖುಷಿಯಾಗಿದೆ ಎಂದು ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್​​ (AB De Villiers) ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net