ಫೋಟೋಶೂಟ್​ನಲ್ಲಿ ಮಹಿಳಾ ಕ್ರಿಕೆಟರ್ ಜೂಲನ್​​ಗೆ ಅವಮಾನ ಮಾಡಿದರೇ ಬಾಲಿವುಡ್​ ನಟಿ ಅಹನಾ?

julan web
Published on

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರಿಗೆ ಬಾಲಿವುಡ್ ನಟಿ ಅಹನಾ ಕುಮ್ರಾ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ವಿಶೇಷವಾದ ಗೌರವ ಸಲ್ಲಿಸಿದ್ದರು. ಜೂಲನ್ ಗೋಸ್ವಾಮಿ ಅವರಂತೆಯೇ ಕಾಣುವ ತಮ್ಮ ಚಿತ್ರಗಳನ್ನು ಅಹನಾ ಪೋಸ್ಟ್ ಮಾಡಿದ್ದರು. ಜೂಲನ್ ಅವರಂತೆಯೇ ಕೇಶವಿನ್ಯಾಸ ಮಾಡಿದ್ದ ಅಹನಾ, ಭಾರತ ತಂಡದ ಜೆರ್ಸಿಯನ್ನೂ ಧರಿಸಿದ್ದರು. ಆದರೆ ಫೋಟೋಶೂಟ್​ನ ಮೇಕ್‌ಅಪ್ ವಿಚಾರದಲ್ಲಿ ಅಹನಾ ಮಾಡಿದ ಎಡವಟ್ಟಿನಿಂದಾಗಿ ಇದೀಗ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದ್ದಾರೆ. ಜೂಲನ್ ಅವರ ಮೈಬಣ್ಣಕ್ಕೆ ಹೋಲಿಕೆಯಾಗಿ ಅಹನಾ ಕೂಡ ಮುಖಕ್ಕೆ ಕಪ್ಪುಬಣ್ಣ ಬಳಿದುಕೊಂಡಿದ್ದರು. ಇದು ಈಗ ನಟಿಗೆ ತಿರುಮಂತ್ರವಾಗಿದ್ದು, ಮಹಿಳಾ ಕ್ರಿಕೆಟರ್‌ಗೆ ಗೌರವ ಸಲ್ಲಿಸುವ ನೆಪದಲ್ಲಿ ನಟಿಯಿಂದ ಅವಮಾನವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

‘ನಾನು ಯಾವುದೇ ಚಲನಚಿತ್ರವನ್ನು ಪ್ರಚಾರ ಮಾಡುತ್ತಿಲ್ಲ. ನಾನು ಅತ್ಯಂತ ಹೆಚ್ಚು ಗೌರವಿಸುವ ಮಹಿಳೆಗೆ ಇದು ನನ್ನ ಪ್ರೀತಿಯ ಕಾಣಿಕೆ. ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತ ಅವರ ಜೀವನಪಯಣ, ಕಠಿಣ ಪರಿಶ್ರಮ ಮತ್ತು ಕ್ರೀಡೆಯ ಮೇಲಿನ ಪ್ರೀತಿಯ ಬಗ್ಗೆ ತಿಳಿದುಕೊಂಡೆ. ಜೂಲದ್ ದಿ ಎಂದೇ ಸಹ-ಆಟಗಾರ್ತಿಯರಿಂದ ಕರೆಯಲ್ಪಡುವ ಜೂಲನ್ ಗೋಸ್ವಾಮಿ, ಭಾರತ ಮಹಿಳಾ ತಂಡದ ಎಲ್ಲ ಸದಸ್ಯರಿಂದ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ. ನನ್ನ ಈ ಚಿತ್ರ ಸರಣಿಗಳು ಅವರಿಗೆ ನನ್ನ ಪ್ರೀತಿಯ ಕಾಣಿಕೆ. ನಟಿಯರಾಗಿ ನಾವೆಲ್ಲರೂ ಮುಂದೊಂದು ದಿನ ಏಕತಾನತೆಯನ್ನು ಹಿಮ್ಮೆಟ್ಟಿಸಿ ಶ್ರೇಷ್ಠ ಕಥೆಗಳನ್ನು ಹೇಳುವ ದಿನಗಳು ಬರಲಿ. ಜೂಲನ್ ಗೋಸ್ವಾಮಿಯವರೇ ನಿಮ್ಮ ಕಥೆಗೆ ಧನ್ಯವಾದಗಳು. ನಿಮಗೆ ಎಂದೆಂದಿಗೂ ಅತ್ಯುತ್ತಮವಾದುದು ಸಿಗಲಿ ಎಂದು ಹಾರೈಸುತ್ತೇನೆ. ನಿಮ್ಮ ಅಭಿಮಾನಿ. -ಎಕೆ’ ಎಂದು ಅಹನಾ ಕುಮ್ರಾ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆದರೆ ಅಹನಾ ಕುಮ್ರಾ ಅವರ ಈ ನಡೆಯಿಂದ ನೆಟ್ಟಿಗರು ಸಂತಸಗೊಂಡಿಲ್ಲ. ಜೂಲನ್ ಮೈಬಣ್ಣಕ್ಕೆ ಹೋಲಿಕೆ ಮಾಡಲ ಯತ್ನಿಸಿ, ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡಿರುವ ಅಹನಾ ಕುಮ್ರಾ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬೇಕಿದ್ದರೆ ಜೂಲನ್ ಮೈಬಣ್ಣದ ಬೇರೆ ನಟಿಯರಿಂದ ಈ ಫೋಟೋಶೂಟ್ ಮಾಡಿಸಬಹುದಿತ್ತು ಎಂದಿದ್ದಾರೆ.

ನಿಮ್ಮ ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಳ್ಳುವ ಮೂಲಕ ಸ್ಟಾರ್ ಕ್ರಿಕೆಟರ್‌ಗೆ ಯಾವ ರೀತಿಯ ಗೌರವ ಸಲ್ಲಿಸಿದ್ದೀರಿ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಜೂಲನ್ ಗೋಸ್ವಾಮಿ ಬಗ್ಗೆ ಸಿನಿಮಾ ಮಾಡಲು ಯಾರಾದರೂ ನಿರ್ದೇಶಕರು ಮುಂದಾದರೆ ಈ ಪಾತ್ರ ತಮಗೆ ಸಿಗಲಿ ಎಂದೇ ಅಹನಾ ಫೋಟೋ ಶೂಟ್ ಮಾಡಿಸಿದಂತಿದೆ ಎಂದೂ ದೂರಿದ್ದಾರೆ.

ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಳ್ಳುವ ಮೂಲಕ ಜೂಲನ್ ಗೋಸ್ವಾಮಿ ಬಣ್ಣದ ಬಗ್ಗೆಯೂ ನೀವು ಬೆರಳು ಮಾಡಿ ತೋರಿಸಿದಂತಿದೆ. ಇದು ನಿಜಕ್ಕೂ ವರ್ಣಭೇದವಾಗಿದೆ ಎಂದು ಇನ್ನೂ ಕೆಲವರು ಕಿಡಿಕಾರಿದ್ದಾರೆ. ಈ ನಡುವೆ ಜೂಲನ್ ಗೋಸ್ವಾಮಿ ಮಾತ್ರ ಈ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದೆ, ಅಹನಾ ಕುಮ್ರಾ ಅವರಿಗೆ ‘ಗ್ರೇಟ್ ಜಾಬ್, ಕೀಪ್ ಇಟ್ ಅಪ್’ ಎಂಬ ಮೆಚ್ಚುಗೆಯ ಸಂದೇಶ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net