

ನವದೆಹಲಿ: ಪ್ರಸಕ್ತ ದೆಹಲಿಯಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ನ ( IND vs WI Test) ನಾಲ್ಕನೇ ದಿನದಾಟದಲ್ಲಿ ಭಾರತ ಗೆಲುವಿಗೆ ಸನ್ನಿಹಿತವಾಗಿದೆ. ಈ ಮಧ್ಯೆ, ಸ್ಟೇಡಿಯಂನಲ್ಲಿ ಪಂದ್ಯ ನೋಡಲು ಬಂದಿದ್ದ ಯುವ ಜೋಡಿ, ಅದ್ಯಾಕೋ ಏನೋ ಇದ್ದಕ್ಕಿದ್ದಂತೆ ಜಗಳ ಮಾಡಿಕೊಂಡಂತೆ ದೃಶ್ಯದಲ್ಲಿ ಕಂಡುಬಂದಿದ್ದು, ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದ್ವಿತೀಯ ಟೆಸ್ಟ್ನ ನಾಲ್ಕನೇ ದಿನದಾಟದಂದು, 121 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ನಾಲ್ಕನೇ ದಿನದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ. ಕೆ.ಎಲ್ ರಾಹುಲ್ (25 ರನ್) ಮತ್ತು ಸಾಯಿ ಸುದರ್ಶನ್ (30 ರನ್) ಬಾರಿಸುವ ಮೂಲಕ ಕ್ರೀಸ್‌ನಲ್ಲಿದ್ದಾರೆ. ಗೆಲ್ಲಲು ಭಾರತಕ್ಕೆ 58 ರನ್ ಅಗತ್ಯವಿದ್ದು, ಇನ್ನೂ 9 ವಿಕೆಟ್‌ಗಳು ಭದ್ರವಾಗಿವೆ. ಇದು ಒಂದೆಡೆಯಾದರೆ, ಈ ಪಂದ್ಯವನ್ನು ನೋಡಲು ದೆಹಲಿಯ ಅರುಣ್ ಜೆಟ್ಲಿ ಸ್ಟೇಡಿಯಂಗೆ ಆಗಮಿಸಿದ್ದ ಯುವ ಜೋಡಿಗಳ ಕಿತ್ತಾಟ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.
ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ವೇಳೆ ಈ ಘಟನೆ ನಡೆದಿದೆ. ಪಂದ್ಯ ವೀಕ್ಷಿಸುತ್ತಿದ್ದ ಯುವಕ ಮತ್ತು ಯುವತಿ ನಡುವೆ ಯಾವುದೋ ವಿಚಾರಕ್ಕೆ ಮಾತುಕತೆ ಉಂಟಾಗಿದ್ದು, ಆತನಿಗೆ ಒಂದಲ್ಲ ಎರಡು ಬಾರಿ ಯುವತಿ ಕಪಾಳಮೋಕ್ಷ ಮಾಡಿದ್ದಾಳೆ. ಮೇಲ್ನೋಟಕ್ಕೆ ಇವರಿಬ್ಬರು ಪ್ರೇಮಿಗಳು ಎಂಬಂತೆ ಕಾಣುತ್ತದೆ. ಆದರೆ, ಯಾಕಾಗಿ ಜಗಳ ಮಾಡಿಕೊಂಡರು ಎಂಬುದು ಅಸ್ಪಷ್ಟ. ಇಷ್ಟಕ್ಕೆ ಸುಮ್ಮನಾಗದ ಯುವತಿ, ಆತನ ಕುತ್ತಿಗೆ ಹಿಡಿದು ಯಾರನ್ನೋ ತೋರಿಸಿ, ಏನೋ ಎಚ್ಚರಿಕೆ ನೀಡಿದಂತಿದೆ. ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ಹಲವರು ಯಾರಿವರಿಬ್ಬರು? ನಿಮಗೆ ಗೊತ್ತಾ? ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ,(ಏಜೆನ್ಸೀಸ್).