

ಅವಿನಾಶ್ ಜೈನಹಳ್ಳಿ ಮೈಸೂರು
ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ‘ವುಶು’ ಕ್ರೀಡಾ ಕ್ಷೇತ್ರದ ಭವಿಷ್ಯದ ತಾರೆಯೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಉದಯವಾಗುತ್ತಿದೆ.
ಬಹಳ ಹಿಂದಿನಿಂದ ನಗರದಲ್ಲಿ ಕಾಡುತ್ತಿರುವ ವುಶು ಪ್ರತಿಭೆಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರತಿಭೆ, ಸಾಮರ್ಥ್ಯ, ಶ್ರಮ, ಆಸಕ್ತಿ ಮತ್ತು ಸ್ಪಷ್ಟ ಗುರಿಯೊಂದಿಗೆ ಪುಟಾಣಿ ಜಿ.ಪ್ರಣತಿ ಸಿದ್ಧಳಾಗುತ್ತಿದ್ದಾಳೆ.
ವುಶು ಕ್ರೀಡೆಯ ರಾಜ್ಯ ಹಾಗೂ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಬೇಟೆಯಾಡಿರುವ ಪ್ರಣತಿಯ ವಯಸ್ಸು ಇನ್ನೂ 8 ವರ್ಷ. ಪ್ರಸ್ತುತ ರಾಜ್ಯ ವುಶು ಚಾಂಪಿಯನ್ (ಸಬ್ ಜೂನಿಯರ್ ವಿಭಾಗ) ಪಟ್ಟಕೇರಿರುವ ಪ್ರಣತಿ, ರಾಜ್ಯ ಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಹ್ಯಾಟ್ರಿಕ್ ಚಿನ್ನದ ಪದಕ ಸಾಧನೆ ಮಾಡಿದ ಪ್ರತಿಭೆ.
ಇಷ್ಟು ದಿನ ಬಾಗಲಕೋಟೆ, ಬೆಂಗಳೂರು, ಶಿವಮೊಗ್ಗ, ಚಾಮರಾಜನಗರ, ಜಮಖಂಡಿ, ವಿಜಯಪುರ ಸೇರಿದಂತೆ ಇತರ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳು ಮಾತ್ರ ವುಶು ಚಾಂಪಿಯನ್‌ಶಿಪ್‌ನಲ್ಲಿ ಪದಕವನ್ನು ಕೊರಳಿಗೇರಿಸಿಕೊಳ್ಳುತ್ತಿದ್ದರು. ಆದರೆ, ಇದೀಗ ಮೈಸೂರಿನ ಪ್ರಣತಿ ರಾಜ್ಯ ಮತ್ತು ರಾಷ್ಟ್ರೀಯ ವುಶು ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಮೂಲಕ ಸಾಂಸ್ಕೃತಿಕ ನಗರಿಯ ಕೊರಗನ್ನು ನೀಗಿಸಿದ್ದಾಳೆ. ನಗರದ ಗಾಯತ್ರಿಪುರಂನ ಎಲ್.ಸಂಗೀತಾ ಮತ್ತು ಎಸ್.ಡಿ.ಗಿರಿಧರ್ ದಂಪತಿಯ ಪುತ್ರಿ ಪ್ರಣತಿ, ನಗರದ ಪೊಲೀಸ್ ಪಬ್ಲಿಕ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ.
ವುಶು ಕ್ರೀಡೆಯಲ್ಲಿ ಒಟ್ಟಾರೆ 10ಕ್ಕೂ ಹೆಚ್ಚು ಪದಕ ಪಡೆದಿರುವ ಈಕೆ, ಆರನೇ ವಯಸ್ಸಿನಲ್ಲೇ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದಾಳೆ. ರಾಷ್ಟ್ರ ಮಟ್ಟದಲ್ಲಿ ಎರಡು ಕಂಚಿನ ಪದಕ ಪಡೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಅತಿ ಕಿರಿಯ ವಯಸ್ಸಿನ ಪದಕ ವಿಜೇತೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾಳೆ. 2020ರಲ್ಲಿ ಗದಗ, 2021ರಲ್ಲಿ ಮಂಗಳೂರಿನ ಮೂಡುಬಿದಿರೆ ಹಾಗೂ 2022ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಚಾಂಪಿಯನ್‌ಷಿಪ್‌ನ 20 ಕೆ.ಜಿ. ಒಳಗಿನವರ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ. 2020ರಲ್ಲಿ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಪಿಷ್‌ನಲ್ಲಿ ಭಾಗವಹಿಸಿ ಗಮನಾರ್ಹ ಪ್ರದರ್ಶನ ನೀಡಿದ್ದಾಳೆ. ಬಳಿಕ 2021ರಲ್ಲಿ ತಮಿಳು ನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದು ಸಾಧನೆ ಮಾಡಿದ್ದಾಳೆ. 2022ರಲ್ಲಿ ಹಿಮಾಚಲಪ್ರದೇಶದಲ್ಲಿ ನಡೆದ ಸ್ಪರ್ಧೆಯಲ್ಲೂ ಕಂಚು ಗೆದ್ದು, ರಾಷ್ಟ್ರ ಮಟ್ಟದಲ್ಲಿ ಪದಕ ಬೇಟೆ ಮುಂದುವರಿಸಿದ್ದಾಳೆ.
ಭವಿಷ್ಯದಲ್ಲಿ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ಬಹುಮಾನ ಗಳಿಸಬೇಕೆಂಬ ಗುರಿಯೊಂದಿಗೆ ಪ್ರಣತಿ ನಿತ್ಯ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಪಾರ್ತಿಪ ಮತ್ತು ದರ್ಶನ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.
ಶಾಲೆ ಇರುವ ದಿನಗಳಲ್ಲಿ ಬೆಳಗ್ಗೆ 6 ರಿಂದ 8 ಗಂಟೆ ಹಾಗೂ ಸಂಜೆ 5 ರಿಂದ 8 ಗಂಟೆವರೆಗೆ ಹಾಗೂ ರಜಾ ದಿನಗಳಲ್ಲಿ ಬೆಳಗ್ಗೆ 6.30 ರಿಂದ 9 ಗಂಟೆ ಹಾಗೂ ಸಂಜೆ 4.30 ರಿಂದ 6.30 ರವರೆಗೆ ಅಭ್ಯಾಸ ಮಾಡುತ್ತಿದ್ದಾಳೆ. ಜತೆಗೆ, ಮನೆಯಲ್ಲಿ ಇದ್ದಾಗಲೂ ವುಶು ಅಭ್ಯಾಸ ಮಾಡುತ್ತಾಳೆ.
ಅಂತಾರಾಷ್ಟ್ರೀಯ ವುಶು ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಜತೆಗೆ ಐಪಿಎಸ್/ಐಎಎಸ್ ಪಾಸ್ ಮಾಡಿ ಜನರ ಸೇವೆ ಮಾಡಬೇಕು ಎನ್ನುವುದು ಪ್ರಣತಿಯ ಕನಸು. ಈಕೆ ತನ್ನ ನಾಲ್ಕನೇ ವಯಸ್ಸಿಗೇ ವುಶು ಅಭ್ಯಾಸ ಮಾಡಲು ಶುರು ಮಾಡಿದಳು. ಎರಡು ವರ್ಷಗಳಲ್ಲಿ ಸ್ಪರ್ಧೆಗೆ ಬೇಕಾದ ಎಲ್ಲ ಕೌಶಲ-ಸಾಮರ್ಥ್ಯಗಳನ್ನು ಪಡೆದಿದ್ದ ಪ್ರಣತಿ, 6ನೇ ವಯಸ್ಸಿಗೆ ರಾಜ್ಯ ಮಟ್ಟದ ವುಶು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಬೇಟೆಯಾಡಿ ಎಲ್ಲರ ಗಮನ ಸೆಳೆದಳು.
ಪುಟಾಣಿ ಪ್ರತಿಭೆ ಪ್ರಣತಿಗೆ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಮೈಸೂರಿನ ಅಖಿಲ ಭಾರತೀಯ ವಾಕ್-ಶ್ರವಣ ಸಂಸ್ಥೆಯಲ್ಲಿ ನಡೆದ 2022ರ ಬೇಸಿಗೆ ಶಿಬಿರದಲ್ಲಿ ಪ್ರಣತಿ ಸಂಪನ್ಮೂಲ ವ್ಯಕ್ತಿಯಾಗಿ ಸಣ್ಣ ಮಕ್ಕಳಿಗೆ ಕೌಶಲ ತರಬೇತಿ ನೀಡಿರುವುದು ಮತ್ತೊಂದು ವಿಶೇಷ. 2022ರ ದಸರಾ ಕ್ರೀಡಾ ಮತ್ತು ಕುಸ್ತಿ ಉಪ ಸಮಿತಿ ವತಿಯಿಂದ ಪ್ರಣತಿಯನ್ನು ಸನ್ಮಾನಿಸಲಾಗಿದೆ. ನಗರ ಪಾಲಿಕೆಯಿಂದಲೂ ಅಭಿನಂದಿಸಲಾಗಿದೆ.
2022ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ‘ಬಾಲ ಪ್ರಶಸ್ತಿ’ ಲಭಿಸಿದೆ. ಜಿಲ್ಲಾ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ‘ಕನ್ನಡ ವಿಕಾಸ ರತ್ನ’ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳನ್ನು ನೀಡಲಾಗಿದೆ. ಇಂಡಿಯಾ ವರ್ಡ್ ರೆಕಾರ್ಡ್ಸ್‌ನಲ್ಲಿ ಪ್ರಣತಿ ಅತಿ ಕಿರಿಯ ವುಶು ಚಾಂಪಿಯನ್ ಎಂಬ ದಾಖಲೆ ಹೊಂದಿದ್ದಾಳೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಚ್ಚು ವುಶು ಚಾಂಪಿಯನ್‌ಷಿಪ್ ಗೆದ್ದ ಅತಿ ಕಿರಿಯ ಬಾಲಕಿ ಎಂಬ ದಾಖಲೆಯನ್ನು ಪ್ರಣತಿ ಹೊಂದಿದ್ದಾಳೆ.
ಮಗಳ ಸಾಧನೆ ನೋಡಿದರೆ ಖುಷಿಯಾಗುತ್ತದೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಂತಾರಾಷ್ಟ್ರೀಯ ವುಶು ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಜತೆಗೆ ಐಪಿಎಸ್/ಐಎಎಸ್ ಪಾಸ್ ಮಾಡಿ ಜನರ ಸೇವೆ ಮಾಡಬೇಕು ಎನ್ನುವುದು ಪ್ರಣತಿಯ ಕನಸಾಗಿದೆ. ಅವಳ ಎಲ್ಲ ಕನಸಿಗೂ ನಮ್ಮ ಬೆಂಬಲ ಇದೆ.ಎಸ್.ಡಿ.ಗಿರಿಧರ್, ಪ್ರಣತಿ ತಂದೆ