

ಆಮ್ಸ್ಟರ್ಡ್ಯಾಂ: ಮುಂಬರುವ ಏಕದಿನ ವಿಶ್ವಕಪ್ಗೆ ಪೂರ್ವಭಾವಿಯಾಗಿ ನೆದರ್ಲೆಂಡ್ ತಂಡಕ್ಕೆ ಬೆಂಗಳೂರಿನಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದೆ. ಇದರಲ್ಲಿ ನೆಟ್ ಬೌಲರ್ಗಳಾಗಿ ಕಾಣಿಸಿಕೊಳ್ಳುವ ಮೂಲಕ ತಂಡದ ಅಭ್ಯಾಸಕ್ಕೆ ನೆರವಾಗುವ ಅವಕಾಶವನ್ನು ಭಾರತದ ಬೌಲರ್ಗಳಿಗೆ ನೆದರ್ಲೆಂಡ್ ಕ್ರಿಕೆಟ್ ಮಂಡಳಿ ಕಲ್ಪಿಸಿದೆ. ಇದರನ್ವಯ "ನೆಟ್ ಬೌಲರ್ಗಳು ಬೇಕಾಗಿದ್ದಾರೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಕೂಡ ಪ್ರಕಟಿಸಲಾಗಿದೆ.
ಸೆಪ್ಟೆಂಬರ್ 20ರಿಂದ 24ರವರೆಗೆ ಬೆಂಗಳೂರು ಹೊರವಲಯದ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ 5 ದಿನಗಳ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ಓರ್ವ ಎಡಗೈ ವೇಗಿ, ಓರ್ವ ಬಲಗೈ ವೇಗಿ, ಓರ್ವ ಮಿಸ್ಟರಿ ಸ್ಪಿನ್ನರ್ ಮತ್ತು ಓರ್ವ ಎಡಗೈ ಸ್ಪಿನ್ನರ್ ಬೇಕಾಗಿದ್ದಾರೆ ಎಂದು ತಿಳಿಸಲಾಗಿದೆ. ಅಲ್ಲದೆ, ನೆಟ್ ಬೌಲರ್ ಆಗಲು ಬಯಸುವ ವೇಗಿಗಳು ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಮತ್ತು ಸ್ಪಿನ್ನರ್ಗಳು ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರಬೇಕೆಂದು ಮಾನದಂಡ ನಿಗದಿಪಡಿಸಲಾಗಿದೆ.
ಆಸಕ್ತರು ತಮ್ಮ ಬೌಲಿಂಗ್ ವಿಡಿಯೋಗಳನ್ನು ಕಳುಹಿಸುವ ಮೂಲಕ ಅರ್ಜಿ ಸಲ್ಲಸಬಹುದು. ಶಿಬಿರದ ವೇಳೆ ಅವರ ಪ್ರಯಾಣ, ವಸತಿ ಮತ್ತು ಊಟದ ವೆಚ್ಚವನ್ನು ಭರಿಸಲಾಗುವುದು. ಅಭ್ಯರ್ಥಿ 18 ವರ್ಷ ಮೇಲ್ಪಟ್ಟಿರಬೇಕು ಮತ್ತು ಭಾರತೀಯ ನಿವಾಸಿ ಆಗಿರಬೇಕೆಂದು ವಿವರಿಸಲಾಗಿದೆ.