

ಬೆಂಗಳೂರು: ವೇಗಿ ಅಭಿಷೇಕ್ ಪ್ರಭಾಕರ್ (21ಕ್ಕೆ 5) ಮಾರಕ ಬೌಲಿಂಗ್ ದಾಳಿ ಹಾಗೂ ಆರ್.ಸ್ಮರಣ್ (52 ರನ್, 36 ಎಸೆತ, 2 ಬೌಂಡರಿ, 4 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹಾಲಿ ರನ್ನರ್ ಅಪ್ ಮೈಸೂರು ವಾರಿಯರ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದೆ. ಹ್ಯಾಟ್ರಿಕ್ ಜಯದೊಂದಿಗೆ ದೇವದತ್ ಪಡಿಕ್ಕಲ್ ಪಡೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದರೆ, ಕರುಣ್ ನಾಯರ್ ಪಡೆಯ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮೈಸೂರು, ಅಭಿಷೇಕ್ ಪ್ರಭಾಕರ್ ದಾಳಿಗೆ ತತ್ತರಿಸಿ 98 ರನ್‌ಗಳಿಗೆ 8 ವಿಕೆಟ್ ಕೈಚೆಲ್ಲಿ ಸಂಕಷ್ಟಕ್ಕೆ ಸಿಲುಕಿತು. ಆಗ ಯುವ ಆಲ್ರೌಂಡರ್ ಮನೋಜ್ ಭಾಂಡಗೆ (38 ರನ್, 14 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ಜೆ. ಸುಚಿತ್ (25* ರನ್, 22 ಎಸೆತ, 1 ಬೌಂಡರಿ, 1 ಸಿಕ್ಸರ್) ನಡೆಸಿದ ಜತೆಯಾಟದ ನೆರವಿನಿಂದ ಚೇತರಿಸಿಕೊಂಡು 9 ವಿಕೆಟ್‌ಗೆ 154 ರನ್ ಕಲೆಹಾಕಿತು. ಪ್ರತಿಯಾಗಿ ಉತ್ತಮ ಆರಂಭ ಪಡೆದ ಗುಲ್ಬರ್ಗಾ ತಂಡ, ಆರ್. ಸ್ಮರಣ್ ಅರ್ಧಶತಕದ ನೆರವಿನಿಂದ 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 157 ರನ್‌ಗಳಿಸಿ ಹ್ಯಾಟ್ರಿಕ್ ಜಯಭೇರಿ ಕಂಡಿತು.
ಮೈಸೂರು ವಾರಿಯರ್ಸ್: 9 ವಿಕೆಟ್‌ಗೆ 156 (ಜಾಸ್ಪರ್ 2, ಎಸ್‌ಯು ಕಾರ್ತಿಕ್ 24, ಕರುಣ್ 0, ಸಮಿತ್ 12, ಹರ್ಷಿಲ್ 16, ಜೆ. ಸುಚಿತ್ 25*, ಕೆ.ಗೌತಮ್ 11, ಮನೋಜ್ 38, ಅಭಿಷೇಕ್ 21ಕ್ಕೆ 5, ವೈಶಾಕ್ 41ಕ್ಕೆ 2).
ಗುಲ್ಬರ್ಗಾ ಮಿಸ್ಟಿಕ್ಸ್: 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 157 (ಲವನೀತ್ 23, ಪಡಿಕ್ಕಲ್ 24, ಅನೀಶ್ 8, ಆರ್.ಸ್ಮರಣ್ 52, ರಿತೇಶ್ 22, ಪ್ರವೀಣ್ 17,ಭಾಂಡಗೆ 36ಕ್ಕೆ 2).
ಪಂದ್ಯಶ್ರೇಷ್ಠ: ಅಭಿಷೇಕ್ ಪ್ರಭಾಕರ್