ನ್ಯೂಜಿಲೆಂಡ್​ನಲ್ಲಿ ಭಾರತಕ್ಕೆ ಸರಣಿ ಸೋಲು

India defeat 2
Published on

ಕ್ರೖೆಸ್ಟ್​ಚರ್ಚ್: ಆತಿಥೇಯ ನ್ಯೂಜಿಲೆಂಡ್ ತಂಡದ ಪ್ರಬಲ ನಿರ್ವಹಣೆ ಎದುರು ಮತ್ತೊಮ್ಮೆ ಮುಗ್ಗರಿಸಿದ ಪ್ರವಾಸಿ ಭಾರತ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಶರಣಾಯಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 0-2ರಿಂದ ಸೋಲು ಕಂಡಿತು. ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ (ಡಬ್ಲ್ಯುಟಿಸಿ) ಭಾರತಕ್ಕಿದು ಸತತ 2ನೇ ಸೋಲು ಮತ್ತು ಮೊದಲ ಸರಣಿ ಸೋಲಾಗಿದೆ.

ಟಿ20 ಸರಣಿಯಲ್ಲಿ 5-0 ಕ್ಲೀನ್ ಸ್ವೀಪ್ ಸಾಧನೆಯೊಂದಿಗೆ ಕಿವೀಸ್ ಪ್ರವಾಸವನ್ನು ಆರಂಭಿಸಿದ್ದ ಭಾರತ ತಂಡ ಏಕದಿನ ಸರಣಿಯಲ್ಲಿ 0-3ರಿಂದ ವೈಟ್​ವಾಷ್ ಮುಖಭಂಗಕ್ಕೀಡಾಗಿತ್ತು. ಇದೀಗ ಟೆಸ್ಟ್ ಸರಣಿಯಲ್ಲೂ ಆತಿಥೇಯರ ವೇಗದ ದಾಳಿಗೆ ತತ್ತರಿಸಿದ ವಿರಾಟ್ ಕೊಹ್ಲಿ ಬಳಗ ನ್ಯೂಜಿಲೆಂಡ್ ಪ್ರವಾಸವನ್ನು ನಿರಾಶಾ ದಾಯಕವಾಗಿ ಮುಗಿಸಿದೆ.

ಹ್ಯಾಗ್ಲೆ ಓವಲ್ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯ ದಲ್ಲಿ ಭಾರತ ನೀಡಿದ 132 ರನ್ ಗೆಲುವಿನ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ, 36 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಕಿವೀಸ್ ವೇಗದ ದಾಳಿಗೆ ತತ್ತರಿಸಿದ ಭಾರತ ತಂಡ ಬೆಳಗ್ಗೆ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಕೇವಲ 124 ರನ್​ಗಳಿಗೆ 2ನೇ ಇನಿಂಗ್ಸ್ ಮುಗಿಸಿತ್ತು. ಭಾರತ ತಂಡ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದ ನಡುವೆಯೂ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಲು ವಿಫಲವಾಯಿತು.

ಆತಿಥೇಯ ವೇಗಿಗಳ ಸವಾಲನ್ನು ದಿಟ್ಟವಾಗಿ ಎದುರಿಸಲು ವಿಫಲವಾದ ವಿಶ್ವ ನಂ. 1 ಟೆಸ್ಟ್ ತಂಡವಾಗಿರುವ ಭಾರತ, ಕೇವಲ ಎರಡೂವರೆ ದಿನಗಳಲ್ಲೇ ಶರಣಾಯಿತು. ವೇಗಿ ಮೊಹಮದ್ ಶಮಿ ಬ್ಯಾಟಿಂಗ್ ವೇಳೆ ಆದ ಗಾಯದಿಂದಾಗಿ ಭೋಜನ ವಿರಾಮದ ಬಳಿಕ ಬೌಲಿಂಗ್​ಗೆ ಇಳಿಯಲಿಲ್ಲ. ಕಿವೀಸ್ ಮೊದಲ ಇನಿಂಗ್ಸ್​ನಲ್ಲಿ ಬಾಲಂಗೋಚಿಗಳನ್ನು ಬೇಗನೆ ಕಟ್ಟಿ ಹಾಕಿ ಭಾರತ ತಂಡ 60-80 ರನ್​ಗಳ ಮುನ್ನಡೆ ಸಾಧಿಸುವಲ್ಲಿ ಸಫಲವಾಗಿದ್ದರೆ, ಸವಾಲಿನ ಗುರಿ ನೀಡಿ ಪಂದ್ಯ ವಶಪಡಿಸಿಕೊಳ್ಳುವ ಉತ್ತಮ ಅವಕಾಶ ಲಭಿಸುತ್ತಿತ್ತು. ಸೋಲಿನ ನಡುವೆ ಭಾರತ ತಂಡ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ನ್ಯೂಜಿಲೆಂಡ್ ತಂಡ 180 ಅಂಕದೊಂದಿಗೆ 3ನೇ ಸ್ಥಾನಕ್ಕೇರಿದೆ. 

ಹತ್ತೇ ಓವರ್​ಗಳಲ್ಲಿ ಭಾರತ ಆಲೌಟ್

ಸೋಮವಾರ ಬೆಳಗ್ಗೆ 6 ವಿಕೆಟ್​ಗೆ 90 ರನ್​ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಹತ್ತೇ ಓವರ್​ಗಳಲ್ಲಿ 34 ರನ್ ಸೇರಿಸಿ ಕೊನೇ 4 ವಿಕೆಟ್ ಕಳೆದುಕೊಂಡಿತು. ಕ್ರಮವಾಗಿ 5 ಮತ್ತು 1 ರನ್​ನಿಂದ ದಿನದಾಟ ಆರಂಭಿಸಿದ ಹನುಮ ವಿಹಾರಿ ಮತ್ತು ರಿಷಭ್ ಪಂತ್ ದಿನದ 3ನೇ ಓವರ್​ನಲ್ಲೇ ಬೇರ್ಪಟ್ಟರು. ಇದರಿಂದ ಭಾರತ ಕನಿಷ್ಠ ಸ್ಪರ್ಧಾತ್ಮಕ ಮೊತ್ತದ ಸವಾಲನ್ನಾದರೂ ನಿಗದಿಪಡಿಸುವ ಅವಕಾಶವನ್ನು ಕೈಚೆಲ್ಲಿತು. ವಿಹಾರಿ ಮತ್ತು ಪಂತ್ ಇಬ್ಬರೂ ವಿಕೆಟ್ ಕೀಪರ್ ವಾಟ್ಲಿಂಗ್ ಕ್ಯಾಚ್ ನೀಡಿ ಕ್ರಮವಾಗಿ ಸೌಥಿ ಮತ್ತು ಪಂತ್ ಬೌಲ್ಟ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ಆಲ್ರೌಂಡರ್ ರವೀಂದ್ರ ಜಡೇಜಾ (16*) ಕಿವೀಸ್​ಗೆ ಸವಾಲಾಗಿ ನಿಲ್ಲುವ ಪ್ರಯತ್ನ ನಡೆಸಿದರೂ, ಬಾಲಂಗೋಚಿಗಳಿಂದ ಅವರಿಗೆ ಸಮರ್ಥ ಬೆಂಬಲ ಸಿಗಲಿಲ್ಲ. ತಂಡದ ಮೊತ್ತವನ್ನು 120ರ ಗಡಿ ದಾಡಿಸಲುವಲ್ಲಿ ಮಾತ್ರ ಜಡೇಜಾ ಯಶ ಕಂಡರು.

ಸುದ್ದಿಗಾರರ ಪ್ರಶ್ನೆಗೆ ಕೊಹ್ಲಿ ಗರಂ!

ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಔಟಾದಾಗ ಕೊಹ್ಲಿ ಆಕ್ರಮಣಕಾರಿ ವರ್ತನೆಯ ಸಂಭ್ರಮ ತೋರಿದ್ದರು. ಪಂದ್ಯದ ಬಳಿಕ ಕಿವೀಸ್ ಪತ್ರಕರ್ತರು ಈ ಬಗ್ಗೆ ಪ್ರಶ್ನೆ ಕೇಳಿದಾಗ ಕೊಹ್ಲಿ ಗರಂ ಆದರು. ‘ನಿಮಗೆ ಉತ್ತರ ಬೇಕೆಂದಿದ್ದರೆ ಉತ್ತಮ ಪ್ರಶ್ನೆಯೊಂದಿಗೆ ಬರಬೇಕು. ವಿವಾದ ಸೃಷ್ಟಿಸಬೇಕೆಂದಿದ್ದರೆ ಇದು ಸರಿಯಾದ ಸ್ಥಳವಲ್ಲ. ಪಂದ್ಯದ ರೆಫ್ರಿ (ರಂಜನ್ ಮದುಗಲೆ) ನಾನು ಮಾತನಾಡಿದ್ದೇನೆ. ಅವರಿಗೆ ನನ್ನ ವರ್ತನೆಯಿಂದ ಏನೂ ತೊಂದರೆ ಇಲ್ಲ’ ಎಂದು ಕೊಹ್ಲಿ ಕಿಡಿಕಾರಿದರು.

ಕಿವೀಸ್ ದಿಟ್ಟ ಚೇಸಿಂಗ್

ಸಾಧಾರಣ ಸವಾಲಿಗೆ ಪ್ರತಿಯಾಗಿ ಕಿವೀಸ್ ತಂಡ ದಿಟ್ಟ ಆರಂಭವನ್ನೇ ಪಡೆಯಿತು. ಆರಂಭಿಕರಾದ ಟಾಮ್ ಲಾಥಮ್ (52 ರನ್, 74 ಎಸೆತ, 10 ಬೌಂಡರಿ) ಮತ್ತು ಟಾಮ್ ಬ್ಲಂಡೆಲ್ (55 ರನ್, 113 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕ ಸಿಡಿಸಿದ್ದಲ್ಲದೆ, ಮೊದಲ ವಿಕೆಟ್​ಗೆ ಶತಕದ ಜತೆಯಾಟವಾಡುವ ಮೂಲಕ ಭಾರತೀಯರಿಗೆ ತಿರುಗೇಟು ನೀಡಲು ಅವಕಾಶವಿಲ್ಲದಂತೆ ಮಾಡಿದರು. ಲಾಥಮ್ ಅವರನ್ನು ಔಟ್ ಮಾಡುವ ಮೂಲಕ ಉಮೇಶ್ ಯಾದವ್ ಭಾರತಕ್ಕೆ ಮೊದಲ ಯಶ ತಂದುಕೊಟ್ಟರು. ಬೆನ್ನಲ್ಲೇ ನಾಯಕ ಕೇನ್ ವಿಲಿಯಮ್ಸನ್ ಮತ್ತು ಬ್ಲಂಡೆಲ್ ವಿಕೆಟ್​ಗಳನ್ನು ಬುಮ್ರಾ ಸತತ 2 ಎಸೆತಗಳಲ್ಲಿ ಕಬಳಿಸಿದರು. ಆದರೆ ಅಷ್ಟರಲ್ಲಾಗಲೇ ಸಾಕಷ್ಟು ತಡವಾಗಿತ್ತು. ಹೀಗಾಗಿ ಕಿವೀಸ್ ಚೇಸಿಂಗ್​ಗೆ ಯಾವುದೇ ಅಡ್ಡಿಯಾಗಲಿಲ್ಲ. ಮುರಿಯದ 4ನೇ ವಿಕೆಟ್​ಗೆ ರಾಸ್ ಟೇಲರ್ (5*) ಮತ್ತು ಹೆನ್ರಿ ನಿಕೋಲ್ಸ್ (5*) 11 ರನ್ ಜತೆಯಾಟವಾಡಿ ಚಹಾ ವಿರಾಮಕ್ಕೂ ಮೊದಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸೋಲಿಗೆ ಯಾವುದೇ ನೆಪ ಹೇಳುವುದಿಲ್ಲ. ಆದರೆ ಈ ಟೆಸ್ಟ್ ಸರಣಿಯಲ್ಲಿ ನಾವು ಬಯಸಿದ ಆಟ ಆಡಲು ಸಾಧ್ಯವಾಗಲಿಲ್ಲ. ಬೌಲರ್​ಗಳಿಗೆ ಆಕ್ರಮಣ ನಡೆಸಲು ಸಾಧ್ಯವಾಗುವಂಥ ಮೊತ್ತವನ್ನು ಬ್ಯಾಟ್ಸ್​ಮನ್​ಗಳು ಪೇರಿಸಲಿಲ್ಲ. ಟಾಸ್ ಗೆದ್ದಿದ್ದರೆ ನಮಗೆ ಹೆಚ್ಚು ಬಲ ಸಿಗುತ್ತಿತ್ತು. | ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ

18: ಸರಣಿಯಲ್ಲಿ ಭಾರತ ತಂಡ ಪ್ರತಿ ವಿಕೆಟ್​ಗೆ 18.05ರ ಸರಾಸರಿಯಲ್ಲಿ ರನ್ ಗಳಿಸಿತು. ಇದು ಯಾವುದೇ ಸರಣಿಯಲ್ಲಿ ಭಾರತದ 3ನೇ ಕೆಟ್ಟ ನಿರ್ವಹಣೆಯಾಗಿದೆ. 2002-03ರ ಕಿವೀಸ್ ಪ್ರವಾಸದಲ್ಲಿ ಪ್ರತಿ ವಿಕೆಟ್​ಗೆ 13.37 ರನ್ ಬಂದಿದ್ದರೆ, 1969-70ರಲ್ಲಿ ಕಿವೀಸ್ ವಿರುದ್ಧದ ತವರಿನ ಸರಣಿಯಲ್ಲಿ ಪ್ರತಿ ವಿಕೆಟ್​ಗೆ 16.61 ರನ್ ಗಳಿಸಿತ್ತು.

04: ಸರಣಿಯ 4 ಇನಿಂಗ್ಸ್​ಗಳಲ್ಲಿ ಭಾರತೀಯರಿಂದ ಒಟ್ಟಾರೆ 4 ಅರ್ಧಶತಕಗಳಷ್ಟೇ ದಾಖಲಾದವು. ಕೊಹ್ಲಿ ಸರಣಿಯ 4 ಇನಿಂಗ್ಸ್​ಗಳಿಂದ ಒಟ್ಟು ಗಳಿಸಿದ್ದು 38 ರನ್ ಮಾತ್ರ.

58: ಸರಣಿಯಲ್ಲಿ ಭಾರತದ ಬ್ಯಾಟ್ಸ್​ಮನ್​ನ (ಮಯಾಂಕ್) ಗರಿಷ್ಠ ಗಳಿಕೆ 58 ರನ್. 2002-03ರ ಕಿವೀಸ್ ಪ್ರವಾಸದಲ್ಲಿ ಕೊನೆಯದಾಗಿ ಭಾರತದ ಬ್ಯಾಟ್ಸ್​ಮನ್ ಶತಕ ಬಾರಿಸಿರಲಿಲ್ಲ.

ಭಾರತ ಪ್ರಥಮ ಇನಿಂಗ್ಸ್: 242

ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್: 235

ಭಾರತ ದ್ವಿತೀಯ ಇನಿಂಗ್ಸ್: 46 ಓವರ್​ಗಳಲ್ಲಿ 124 (ಭಾನುವಾರ 6 ವಿಕೆಟ್​ಗೆ 90)

ಹನುಮ ವಿಹಾರಿ ಸಿ ವಾಟ್ಲಿಂಗ್ ಬಿ ಸೌಥಿ 9

ರಿಷಭ್ ಪಂತ್ ಸಿ ವಾಟ್ಲಿಂಗ್ ಬಿ ಬೌಲ್ಟ್ 4

ರವೀಂದ್ರ ಜಡೇಜಾ ಔಟಾಗದೆ 16

ಮೊಹಮದ್ ಶಮಿ ಸಿ ಬ್ಲಂಡೆಲ್ ಬಿ ಸೌಥಿ 5

ಜಸ್​ಪ್ರೀತ್ ಬುಮ್ರಾ ರನೌಟ್ (ಬೌಲ್ಟ್/ಕೇನ್) 4

ಇತರ: 21. ವಿಕೆಟ್ ಪತನ: 6-89, 7-97, 8-97, 9-108. ಬೌಲಿಂಗ್: ಟಿಮ್ ಸೌಥಿ 11-2-36-3, ಟ್ರೆಂಟ್ ಬೌಲ್ಟ್ 14-4-28-4, ಕೈಲ್ ಜೇಮಿಸನ್ 8-4-18-0, ಕಾಲಿನ್ ಡಿ ಗ್ರಾಂಡ್​ಹೋಮ್ 5-3-3-1, ನೀಲ್ ವ್ಯಾಗ್ನರ್ 8-1-18-1.

ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್: 36 ಓವರ್​ಗಳಲ್ಲಿ 3 ವಿಕೆಟ್​ಗೆ 132 (ಗುರಿ: 132 ರನ್)

ಟಾಮ್ ಲಾಥಮ್ ಸಿ ಪಂತ್ ಬಿ ಉಮೇಶ್ 52

ಟಾಮ್ ಬ್ಲಂಡೆಲ್ ಬಿ ಬುಮ್ರಾ 55

ವಿಲಿಯಮ್ಸನ್ ಸಿ ರಹಾನೆ ಬಿ ಬುಮ್ರಾ 5

ರಾಸ್ ಟೇಲರ್ ಔಟಾಗದೆ 5

ಹೆನ್ರಿ ನಿಕೋಲ್ಸ್ ಔಟಾಗದೆ 5

ಇತರ: 10. ವಿಕೆಟ್ ಪತನ: 1-103, 2-112, 3-121. ಬೌಲಿಂಗ್: ಬುಮ್ರಾ 13-2-39-2, ಉಮೇಶ್ ಯಾದವ್ 14-3-45-1, ಶಮಿ 3-1-11-0, ರವೀಂದ್ರ ಜಡೇಜಾ 5-0-24-0, ಕೊಹ್ಲಿ 1-0-4-0.

ಪಂದ್ಯಶ್ರೇಷ್ಠ: ಕೈಲ್ ಜೇಮಿಸನ್

ಸರಣಿಶ್ರೇಷ್ಠ: ಟಿಮ್ ಸೌಥಿ

ಭಾರತಕ್ಕೆ ಮುಂದಿನ ಸರಣಿ: ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ: 3 ಏಕದಿನ ಪಂದ್ಯ ·ಮೊದಲ ಪಂದ್ಯ: ಮಾರ್ಚ್ 12 ·ಎಲ್ಲಿ: ಧರ್ಮಶಾಲಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net