ಇಂದು ಆರ್‌ಸಿಬಿ-ಪಂಜಾಬ್ ಮಾಡು-ಮಡಿ ಕದನ: ಸೋತವರು ಪ್ರಶಸ್ತಿ ರೇಸ್‌ನಿಂದ ಔಟ್

New-Project-1-4
Published on

ಧರ್ಮಶಾಲಾ: ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಆತಿಥೇಯ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-17ರ ತಮ್ಮ 12ನೇ ಲೀಗ್ ಪಂದ್ಯದಲ್ಲಿ ಮರುಮುಖಾಮುಖಿಯಾಗಲಿವೆ. ಗುರುವಾರ ಹಿಮಾಚಲ ಪ್ರದೇಶದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ನಾಕೌಟ್ ಎನಿಸಿದೆ. ಟೂರ್ನಿಯಲ್ಲಿ ತವರಿನ ಆರಂಭಿಕ ಪಂದ್ಯದಲ್ಲಿ ಪಂಜಾಬ್ ಎದುರು ಗೆಲುವು ಕಂಡಿದ್ದ ್ಾ ಡು ಪ್ಲೆಸಿಸ್ ಪಡೆ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಸೋತವರು ಟೂರ್ನಿಯ ಪ್ರಶಸ್ತಿ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದ್ದಾರೆ.

ಗುಜರಾತ್ ಟೈಟಾನ್ಸ್ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿ ಅಂಕಪಟ್ಟಿಯ ಕೊನೇ ಸ್ಥಾನದಿಂದ ಏರಿಕೆ ಕಂಡಿರುವ ಆರ್‌ಸಿಬಿ, ರನ್‌ರೇಟ್‌ನಲ್ಲೂ ಪ್ರಗತಿ ಸಾಧಿಸಿದೆ. ಮತ್ತೊಂದೆಡೆ ಅಸ್ಥಿರ ಪ್ರದರ್ಶನದೊಂದಿಗೆ ಪ್ಲೇಆ್ ರೇಸ್‌ನಲ್ಲಿರುವ ಪಂಜಾಬ್, ಟೂರ್ನಿಯ ಆರಂಭಿಕ ಪಂದ್ಯಗಳನ್ನು ಮುಲ್ಲನ್‌ಪುರದಲ್ಲಿ ಆಡಿತ್ತು. ಈಗ ತನ್ನ ಅಂತಿಮ ಲೀಗ್ ಪಂದ್ಯಗಳನ್ನು 2ನೇ ತವರು ಧರ್ಮಶಾಲಾದಲ್ಲಿ ಆಡಲಿದೆ. ಹಿಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ತವರಿನ ಅಂಗಣದಲ್ಲಿ ಸೋತು ಹಿನ್ನಡೆ ಅನುಭವಿಸಿದೆ. ಪ್ಲೇಆ್ ರೇಸ್‌ನಲ್ಲಿ ಉಳಿಯಲು 2 ತಂಡಗಳಿಗೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಆರ್‌ಸಿಬಿ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 4 ಗೆಲುವು, 7 ಸೋಲಿನೊಂದಿಗೆ 8 ಅಂಕ ಸಂಪಾದಿಸಿದೆ. ಪಂಜಾಬ್ ಸಹ ಇಷ್ಟೇ ಅಂಕಗಳನ್ನು ಹೊಂದಿದ್ದು, ರನ್‌ರೇಟ್‌ನಲ್ಲಿ ಹಿನ್ನಡೆ ಅನುಭವಿಸಿದೆ.

ಪವಾಡದ ನಿರೀಕ್ಷೆಯಲ್ಲಿ ಆರ್‌ಸಿಬಿ: ಪ್ಲೆಸಿಸ್ ಪಡೆ ಪ್ಲೇಆ್ಗೇರಲು ಅದೃಷ್ಟದ ಜತೆಗೆ ಪವಾಡವೂ ಅಗತ್ಯ. ಕೊನೇ ಎರಡು ಲೀಗ್ ಪಂದ್ಯಗಳನ್ನು ತವರಿನಲ್ಲಿ ಆಡಲಿರುವುದು ಆರ್‌ಸಿಬಿಗೆ ಕೊಂಚ ಅನುಕೂಲ ಎನಿಸಿದೆ. ಹಾಲಿ ಆವೃತ್ತಿಯ ಆರಂಭದಲ್ಲಿ ಆರ್‌ಸಿಬಿ ಬ್ಯಾಟಿಂಗ್ ಕ್ರಮಾಂಕ ರನ್‌ಗಳಿಸಲು ಪರದಾಡಿತು. ವಿಲ್ ಜಾಕ್ಸ್‌ನ ಆಗಮನದ ಬಳಿಕ ಹೊಸ ಚೈತನ್ಯ ಪಡೆದುಕೊಂಡಿರುವ ಆರ್‌ಸಿಬಿ ಕಂಬ್ಯಾಕ್ ಮಾಡಿದೆ. ಆದರೆ ಹಿಂದಿನ ಪಂದ್ಯದಲ್ಲಿ ದಿಢೀರ್ ಕುಸಿತ ಕಂಡಿದ್ದು ಎಚ್ಚರಿಕೆಯ ಗಂಟೆ ಎನಿಸಿದೆ. ಶಿಸ್ತಿನ ಕೊರತೆಯಿಂದ ಲಯ ಕಳೆದುಕೊಂಡಿದ್ದ ಬೌಲಿಂಗ್ ವಿಭಾಗ, ಕಳೆದ ಮೂರು ಪಂದ್ಯಗಳಲ್ಲಿ ಉತ್ತಮವಾಗಿ ತಂತ್ರಗಳನ್ನು ಕಾರ್ಯಗತಗೊಳಿಸಿದೆ. ಸಿರಾಜ್, ದಯಾಳ್, ವೈಶಾಕ್ ಎಲ್ಲರೂ ಲಯದಲ್ಲಿದ್ದಾರೆ.

ಅಸ್ಥಿರ ಪಂಜಾಬ್

ಕೆಕೆಆರ್ ವಿರುದ್ಧ ದಾಖಲೆಯ ಯಶಸ್ವಿ ಚೇಸಿಂಗ್ ಬಳಿಕ ಚೆಪಾಕ್‌ನಲ್ಲಿ ಸಿಎಸ್‌ಕೆ ಎದುರಿನ ಗೆಲುವು ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಆತ್ಮವಿಶ್ವಾಸ ವೃದ್ಧಿಸಿತು. ಆದರೆ ಹಿಂದಿನ ಪಂದ್ಯದ ಸೋಲು ಮತ್ತೆ ಘಾಸಿಗೊಳಿಸಿದೆ. ಬ್ಯಾಟಿಂಗ್ ವಿಭಾಗ ಶಶಾಂಕ್ ಸಿಂಗ್ ಮತ್ತು ಆಶುತೋಷ್ ಶರ್ಮರಂಥ ಯುವ ಆಟಗಾರರ ಮೇಲೆ ಅವಲಂಬಿತವಾಗಿದೆ. ಇವರಿಬ್ಬರು ಟೂರ್ನಿಯುದ್ದಕ್ಕೂ ಭರವಸೆ ಮೂಡಿಸಿದ್ದಾರೆ. ಆದರೆ ಜಾನಿ ಬೇರ್‌ಸ್ಟೋ, ರಿಲೀ ರೋಸೌ ಸ್ಥಿರ ನಿರ್ವಹಣೆ ತೋರಬೇಕಿದೆ. ಜಿತೇಶ್ ಶರ್ಮ ಹಾಲಿ ಆವೃತ್ತಿಯಲ್ಲಿ ಹೆಚ್ಚು ಸದ್ದು ಮಾಡಿಲ್ಲ. ಕಳೆದೆರಡು ಪಂದ್ಯದಲ್ಲಿ ಹರ್‌ಪ್ರೀತ್ ಬ್ರಾರ್, ರಾಹುಲ್ ಚಹರ್ ಲಯದಲ್ಲಿ ಕಾಣಿಸಿಕೊಂಡಿದ್ದು, ಆರ್‌ಸಿಬಿ ಬೌಲರ್‌ಗಳಿಗೆ ಸವಾಲಾಗಬಲ್ಲರು.

ಮುಖಾಮುಖಿ: 32

ಪಂಜಾಬ್: 17

ಆರ್‌ಸಿಬಿ: 15

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net