ವಾಂಖೆಡೆಯಲ್ಲಿ ಸಚಿನ ತೆಂಡುಲ್ಕರ್ ದೇಹಗಾತ್ರದ ಪ್ರತಿಮೆ ಸ್ಥಾಪನೆ

Photo of Sachin Tendulkar
Published on

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಏಕದಿನ ವಿಶ್ವಕಪ್ ಗೆಲುವಿನ ಕನಸು ನನಸಾಗಿಸಿಕೊಂಡ ಮತ್ತು ವೃತ್ತಿಜೀವನದ ಕೊನೇ ಟೆಸ್ಟ್ ಪಂದ್ಯವನ್ನು ಆಡಿದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅವರ ದೇಹಗಾತ್ರದ ಪ್ರತಿಮೆ ಸ್ಥಾಪನೆಯಾಗಲಿದೆ.

ಸಚಿನ್ 50ನೇ ವರ್ಷಕ್ಕೆ ಕಾಲಿಡುವ ದಿನವಾದ ಏಪ್ರಿಲ್ 24ರಂದು ಅಥವಾ ಅಕ್ಟೋಬರ್-ನವೆಂಬರ್​ನಲ್ಲಿ ಭಾರತದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಈ ಪ್ರತಿಮೆ ಅನಾವರಣಗೊಳ್ಳಲಿದೆ ಎನ್ನಲಾಗಿದೆ.

ಸ್ಟೇಡಿಯಂನಲ್ಲಿ ಎಲ್ಲಿ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ನಿರ್ಧರಿಸುವ ಸಲುವಾಗಿ ಸಚಿನ್ ಮಂಗಳವಾರ ಪತ್ನಿ ಅಂಜಲಿ ಜತೆಗೂಡಿ ವಾಂಖೆಡೆಗೆ ಆಗಮಿಸಿದ್ದರು. ‘ಮುಂಬೈ ತಂಡವನ್ನು ಪ್ರತಿನಿಧಿಸುತ್ತ ನನ್ನ ಕ್ರಿಕೆಟ್ ಪ್ರಯಣ ಆರಂಭಿಸಿದೆ. ವಾಂಖೆಡೆಯಲ್ಲಿ ಈಗ ನನ್ನ ಜೀವನ ಪೂರ್ಣ ವೃತ್ತ ಕಂಡಿದೆ. ಮುಂಬೈ ಕ್ರಿಕೆಟ್ ಸಂಸ್ಥೆ ಪ್ರತಿಮೆಯ ಬಗ್ಗೆ ಪ್ರಸ್ತಾಪವಿಟ್ಟಾಗ ನನಗೆ ಅಚ್ಚರಿಯಾಗಿತ್ತು. ಇದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿರುವೆ’ ಎಂದು ಸಚಿನ್ ಹೇಳಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ಈಗಾಗಲೆ ಸಚಿನ್ ಹೆಸರಿನ ಸ್ಟ್ಯಾಂಡ್​ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net