ಭಾರತ-ಆಸೀಸ್​ ನಡುವಿನ ಪರ್ತ್​ ಟೆಸ್ಟ್​ಗೆ ವೇಗದ ಬೌಲರ್​ಗಳ ಸ್ವರ್ಗದಂತಿರುವ ಪಿಚ್​!

web pitch
Published on

ಪರ್ತ್​: ಭಾರತ ಮತ್ತು ಆತಿಥೇಯ ಆಸ್ಟ್ರೆಲಿಯಾ ತಂಡಗಳ ನಡುವೆ ಶುಕ್ರವಾರದಿಂದ ನಡೆಯಲಿರುವ ಬಾರ್ಡರ್​&ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಮೊದಲ ಪಂದ್ಯಕ್ಕೆ ಪರ್ತ್​ನಲ್ಲಿ ಬೌನ್ಸಿ ಪಿಚ್​ ಸಿದ್ಧಗೊಂಡಿದೆ. ಆಪ್ಟಸ್​ ಸ್ಟೇಡಿಯಂ ನಡುವಿನ 22 ಯಾರ್ಡ್ಸ್​ನಲ್ಲಿ ನಿರ್ಮಾಣಗೊಂಡಿರುವ ಹಸಿರು ಮತ್ತು ತೇವಾಂಶದ ಪಿಚ್​ ವೇಗದ ಬೌಲರ್​ಗಳ ಸ್ವರ್ಗದಂತೆ ಕಾಣಿಸಿದೆ. ಪಿಚ್​ನ ಮೊದಲ ಚಿತ್ರ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಂಡ ಬೆನ್ನಲ್ಲೇ ವೈರಲ್​ ಆಗಿದೆ.

ಭಾರತ ತಂಡದ ಕೆಲ ಬ್ಯಾಟರ್​ಗಳು ಇತ್ತೀಚೆಗೆ ವಾಕಾ ಮೈದಾನದಲ್ಲಿ ಅಭ್ಯಾಸ ನಡೆಸಿದ ವೇಳೆ ಚೆಂಡೇಟು ತಿಂದು ಗಾಯಗೊಂಡಿದ್ದರು. ಇದರ ನಡುವೆ ಪರ್ತ್​ ಟೆಸ್ಟ್​ಗೆ ಸಿದ್ಧಗೊಂಡಿರುವ ಡ್ರಾಪ್​ ಇನ್​ ಪಿಚ್​ ಭಾರತೀಯ ಬ್ಯಾಟರ್​ಗಳಿಗೆ ಮತ್ತಷ್ಟು ಕಠಿಣ ಸವಾಲೊಡ್ಡುವ ಭೀತಿ ಮೂಡಿಸಿದೆ. ತವರಿನ ಸ್ಪಿನ್​ ಸ್ನೇಹಿ ಧೂಳಿನ ಪಿಚ್​ನಲ್ಲೇ ಆಡಲು ಪರದಾಡಿದ ಭಾರತೀಯ ಬ್ಯಾಟರ್​ಗಳ ನಿದ್ದೆಗೆಡಿಸುವಂಥ ಪಿಚ್​ ಇದಾಗಿದೆ ಎನ್ನಲಾಗಿದೆ.

2018ರಲ್ಲಷ್ಟೇ ನಿರ್ಮಾಣಗೊಂಡಿರುವ ಹೊಸ ಪರ್ತ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕೇವಲ 5ನೇ ಟೆಸ್ಟ್​ ಪಂದ್ಯ ಇದಾಗಿದೆ. ಹಿಂದಿನ 4 ಟೆಸ್ಟ್​ನಲ್ಲಿ ಆಸೀಸ್​ ಗೆದ್ದಿದೆ. 2018ರಲ್ಲಿ ಭಾರತ ವಿರುದ್ಧವೇ ಇಲ್ಲಿ ಆಡಿದ ಮೊದಲ ಟೆಸ್ಟ್​ ಕೂಡ ಇದರಲ್ಲಿ ಸೇರಿದೆ. ಪಾಕಿಸ್ತಾನ ಕಳೆದ ವರ್ಷ ಇಲ್ಲಿ ಆಡಿದ ಟೆಸ್ಟ್​ನಲ್ಲಿ ಆಸೀಸ್​ ವೇಗದ ದಾಳಿ ಎದುರಿಸಲಾಗದೆ ಕೇವಲ 89 ರನ್​ಗಳಿಗೆ ಆಲೌಟ್​ ಆಗಿತ್ತು. ವೆಸ್ಟರ್ನ್​ ಆಸ್ಟ್ರೆಲಿಯಾದ ಮುಖ್ಯ ಕ್ಯುರೇಟರ್​ ಇಸಾಕ್​ ಮೆಕ್​ಡೊನಾಲ್ಡ್​ ಕೂಡ ಕಳೆದ ವರ್ಷದಂತೆ ಬೌನ್ಸಿ ಪಿಚ್​ ಸಿದ್ಧಪಡಿಸುವ ಬಗ್ಗೆ ಈ ಮೊದಲೇ ಸುಳಿವು ನೀಡಿದ್ದರು.

ವಿಶಿಷ್ಟ ಚೆಂಡಿನಲ್ಲಿ ಸ್ಟಾರ್ಕ್​ ಅಭ್ಯಾಸ!

ಬಾರ್ಡರ್​&ಗಾವಸ್ಕರ್​ ಟ್ರೋಫಿಗೆ ಪೂರ್ವಭಾವಿಯಾಗಿ ಆಸ್ಟ್ರೆಲಿಯಾ ತಂಡ ಸೋಮವಾರ ಪರ್ತ್​ನಲ್ಲಿ ಅಭ್ಯಾಸ ಆರಂಭಿಸಿದೆ. ಈ ವೇಳೆ ವೇಗಿ ಮಿಚೆಲ್​ ಸ್ಟಾರ್ಕ್​ ಅರ್ಧ ಕೆಂಪು ಮತ್ತು ಅರ್ಧ ಬಿಳಿ ಬಣ್ಣದಿಂದ ಕೂಡಿದ ವಿಶಿಷ್ಟ ಚೆಂಡಿನಲ್ಲಿ ಅಭ್ಯಾಸ ನಡೆಸಿರುವುದು ಕುತೂಹಲ ಕೆರಳಿಸಿದೆ. ಇದು ಬ್ಯಾಟರ್​ಗಳಿಗೆ ರಿವರ್ಸ್​ ಮತ್ತು ಇತರ ಸ್ವಿಂಗ್​ ಎಸೆತಗಳನ್ನು ಎದುರಿಸಲು ನೆರವಾಗುವಂಥ ಚೆಂಡು ಆಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net