

ಮುಂಬೈ: ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ 89ನೇ ಆವೃತ್ತಿಯ ೈನಲ್ ಪಂದ್ಯದಲ್ಲಿ ಮೊದಲ ದಿನವೇ ಜಿದ್ದಾಜಿದ್ದಿನ ಕಾದಾಟ ಏರ್ಪಟ್ಟಿದೆ. ವಿದರ್ಭದ ಬಿಗಿ ಬೌಲಿಂಗ್ ದಾಳಿಯ ನಡುವೆ ಮುಂಬೈ ತಂಡ ಶಾರ್ದೂಲ್ ಠಾಕೂರ್ (75 ರನ್, 69 ಎಸೆತ, 8 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಬಲದಿಂದ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ವಿದರ್ಭ ಆರಂಭಿಕ ಆಘಾತ ಎದುರಿಸಿದ್ದು, ಮೊದಲ ಇನಿಂಗ್ಸ್ ಮುನ್ನಡೆಗಾಗಿ ನಿಕಟ ಪೈಪೋಟಿ ನಡೆದಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಮುಂಬೈ ತಂಡ, 64.3 ಓವರ್ಗಳಲ್ಲಿ 224 ರನ್ಗಳಿಗೆ ಸರ್ವಪತನ ಕಂಡಿತು. ವಿದರ್ಭ ತಂಡ ದಿನದಂತ್ಯಕ್ಕೆ 3 ವಿಕೆಟ್ಗೆ 31 ರನ್ ಗಳಿಸಿದ್ದು, ಇನ್ನೂ 193 ರನ್ ಹಿನ್ನಡೆಯಲ್ಲಿದೆ. ಆರಂಭಿಕ ಅಥರ್ವ ತೈಡೆ (21*) ಜತೆಗೆ ನೈಟ್ವಾಚ್ಮನ್ ಆದಿತ್ಯ ಠಾಕರೆ (0*) ಕ್ರೀಸ್ನಲ್ಲಿದ್ದಾರೆ.
ವೇಗಿಗಳಾದ ಧವಳ್ ಕುಲಕರ್ಣಿ (9ಕ್ಕೆ 2) ಮತ್ತು ಶಾರ್ದೂಲ್ ಠಾಕೂರ್ (14ಕ್ಕೆ 1) ಬಿಗಿ ದಾಳಿ ಎದುರು ವಿದರ್ಭ 24 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಧ್ರುವ ಶೋರೆ ಮತ್ತು ಕನ್ನಡಿಗ ಕರುಣ್ ನಾಯರ್ ಖಾತೆ ತೆರೆಯದೆ ಔಟಾದರೆ, ಅಮನ್ ಮೋಖಡೆ (8) ನಿರಾಸೆ ಮೂಡಿಸಿದರು.
ರಹಾನೆ, ಶ್ರೇಯಸ್ ವಿಫಲ
ಮುಂಬೈ ತಂಡಕ್ಕೆ ಪ್ರಮುಖ ಬ್ಯಾಟರ್ಗಳು ಕೈಕೊಟ್ಟರು. ಪೃಥ್ವಿ ಷಾ (46) ಮತ್ತು ಭೂಪೆನ್ ಲಾಲ್ವಾನಿ (37) ಮೊದಲ ವಿಕೆಟ್ಗೆ 81 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ನಂತರದಲ್ಲಿ ಹರ್ಷ ದುಬೆ (62ಕ್ಕೆ 3), ಯಶ್ ಠಾಕೂರ್ (54ಕ್ಕೆ 3) ಮತ್ತು ಉಮೇಶ್ ಯಾದವ್ (42ಕ್ಕೆ 2) ದಾಳಿಗೆ ಕುಸಿದ ಮುಂಬೈ 30 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿತು. ನಾಯಕ ಅಜಿಂಕ್ಯ ರಹಾನೆ (7), ಶ್ರೇಯಸ್ ಅಯ್ಯರ್ (7) ಮತ್ತು ಮುಶೀರ್ ಖಾನ್ (6) ವೈಫಲ್ಯ ಕಂಡರು. ನಂತರದಲ್ಲಿ ಶಾರ್ದೂಲ್ ಬಿರುಸಿನ ಬ್ಯಾಟಿಂಗ್ ಮೂಲಕ ಏಕಾಂಗಿಯಾಗಿ ತಂಡದ ಮೊತ್ತ ಏರಿಸಿದರು. ಸೆಮಿೈನಲ್ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಶಾರ್ದೂಲ್ ಈ ಬಾರಿ 37 ಎಸೆತಗಳಲ್ಲೇ ಅರ್ಧಶತಕ ಪೂರೈಸಿ ವಿದರ್ಭ ಬೌಲರ್ಗಳಿಗೆ ಸವಾಲಾದರು.
ಮುಂಬೈ: 64.3 ಓವರ್ಗಳಲ್ಲಿ 224 (ಪೃಥ್ವಿ ಷಾ 46, ಭೂಪೆನ್ 37, ಮುಶೀರ 6, ರಹಾನೆ 7, ಶ್ರೇಯಸ್ 7, ಹಾರ್ದಿಕ್ ತಮೋರೆ 5, ಶಮ್ಸ್ 13, ಶಾರ್ದೂಲ್ 75, ತುಷಾರ್ 14, ಹರ್ಷ ದುಬೆ 62ಕ್ಕೆ 3, ಯಶ್ ಠಾಕೂರ್ 54ಕ್ಕೆ 3, ಉಮೇಶ್ ಯಾದವ್ 43ಕ್ಕೆ 2). ವಿದರ್ಭ: 13 ಓವರ್ಗಳಲ್ಲಿ 3 ವಿಕೆಟ್ಗೆ 31 (ಅಥರ್ವ 21*, ಕರುಣ್ 0, ಧವಳ್ 9ಕ್ಕೆ 2, ಶಾರ್ದೂಲ್ 14ಕ್ಕೆ 1).