

ಹೈದರಾಬಾದ್: ಭಾರತ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೈದರಾಬಾದ್ನಲ್ಲಿ ತನ್ನ ಟೆನಿಸ್ ಅಕಾಡೆಮಿ ಕಟ್ಟಲು ಉದ್ದೇಶಿಸಿದ್ದ ಸ್ವಂತ ಜಾಗದಲ್ಲಿ ಇದೀಗ ಮಸೀದಿಯನ್ನು ನಿರ್ಮಿಸಲು ನಿರ್ಧರಿಸಿದ್ದಾರೆ. ಅವರ ಈ ನಡೆ ವಿವಾದಕ್ಕೂ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಪರ&ವಿರೋಧದ ಚರ್ಚೆಗಳೂ ನಡೆದಿವೆ.
ಹೈದರಾಬಾದ್ನ ಜನನಿಬಿಡ ವಾಣಿಜ್ಯ ಪ್ರದೇಶವೊಂದರಲ್ಲಿ 39 ವರ್ಷದ ಸಾನಿಯಾ ಶಾಪಿಂಗ್ ಸೆಂಟರ್ ಒಂದನ್ನು ಹೊಂದಿದ್ದಾರೆ. ಈ ಕಟ್ಟಡದ ಪಕ್ಕದಲ್ಲೇ ಅವರಿಗೆ ಸೇರಿದ ಖಾಲಿ ಜಾಗವೊಂದಿದೆ. ಅಲ್ಲಿ ಟೆನಿಸ್ ತರಬೇತಿ ಕೇಂದ್ರ ನಿರ್ಮಿಸುವುದು ಅವರ ಯೋಜನೆಯಾಗಿತ್ತು. ಆದರೆ ವಿವಿಧ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಆ ಜಾಗದಲ್ಲಿ ಅವರು ಮಸೀದಿಯೊಂದನ್ನು ತನ್ನದೇ ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಕೊಡಲು ಮುಂದಾಗಿದ್ದಾರೆ. ಆ ಪ್ರದೇಶದ ಸುತ್ತಮುತ್ತ ಯಾವುದೇ ಮಸೀದಿ ಇಲ್ಲದ ಕಾರಣ ಅಲ್ಲಿನ ಜನರು ದೂರ ಪ್ರಯಾಣಿಸಬೇಕಾಗಿತ್ತು. ಈ ಸಮಸ್ಯೆ ಗಮನಿಸಿ ಸಾನಿಯಾ ಮಸೀದಿ ನಿರ್ಮಿಸಿಕೊಡಲು ನಿರ್ಧರಿಸಿದ್ದರು ಎನ್ನಲಾಗಿದೆ.
ಈ ಮಸೀದಿಗೆ ಇತ್ತೀಚೆಗೆ ಅಡಿಪಾಯವನ್ನೂ ಹಾಕಲಾಗಿದೆ. ಸಾನಿಯಾ ಆಪ್ತರಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ತೆಲಂಗಾಣದ ಹಾಲಿ ಸಚಿವ ಮೊಹಮದ್ ಅಜರುದ್ದೀನ್ ಶಂಕುಸ್ಥಾಪನೆ ನೆರವೇರಿಸಿದ್ದರು.
ಕ್ರೀಡಾ ಉದ್ದೇಶಕ್ಕಾಗಿ ಸರ್ಕಾರದಿಂದ ಖರೀದಿಸಿದ ಜಾಗದಲ್ಲಿ ಮಸೀದಿ ನಿರ್ಮಿಸುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಟೆನಿಸ್ ಅಕಾಡೆಮಿ ನಿರ್ಮಿಸಲು ಸಾಧ್ಯವಾಗದಿದ್ದರೆ, ಸಾರ್ವಜನಿಕರ ಅನುಕೂಲಕ್ಕಾಗಿ ಶಾಲೆ, ಆಸ್ಪತ್ರೆ ನಿರ್ಮಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಕೆಲವರು, ಖಾಸಗಿ ಜಾಗದಲ್ಲಿ ತಮಗೆ ಬೇಕಾದುದನ್ನು ಮಾಡಲು ಮಾಲೀಕರಿಗೆ ಹಕ್ಕು ಇದೆ ಎಂದು ಸಾನಿಯಾ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.