

ದುಬೈ: ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ 9 ಅದೃಷ್ಟ ತರುವ ಸೂಚನೆ ಹರಡಿದೆ. ಇದು 9ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಫೈನಲ್ ಮತ್ತು ಮಾರ್ಚ್ 9ರಂದೇ ಫೈನಲ್ ನಡೆಯಲಿದೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಗೆ ಇದು 9ನೇ ಐಸಿಸಿ ಫೈನಲ್. ರೋಹಿತ್ ಜೆರ್ಸಿ ನಂಬರ್ 45. 4+5=-9! ಕೊಹ್ಲಿ ಜೆರ್ಸಿ ನಂ. 18. 1+8=-9!
ಐಸಿಸಿ ಟೂರ್ನಿಗಳಲ್ಲಿ ಮಾರ್ಚ್ 9ರಂದು ಆಡಿದ ಪಂದ್ಯ ಗೆದ್ದ ಇತಿಹಾಸವೂ ಇದೆ. 1996ರ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಮಾರ್ಚ್ 9ರಂದು ಬೆಂಗಳೂರಿನಲ್ಲಿ ಆಡಿದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು.
25 ವರ್ಷಗಳ ಹಿಂದಿನ ಸೇಡು ತೀರಿಸುವ ಗುರಿ
ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 25 ವರ್ಷಗಳ ಹಿಂದಿನ ಲೆಕ್ಕ ಚುಕ್ತಾ ಮಾಡುವ ಅವಕಾಶ ಹೊಂದಿದೆ. 2000ದ 2ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ (ಆಗ ಐಸಿಸಿ ನಾಕೌಟ್ ಕಪ್) ಫೈನಲ್ನಲ್ಲಿ ಭಾರತ ತಂಡ ಕಿವೀಸ್ ಎದುರು 4 ವಿಕೆಟ್ಗಳಿಂದ ಸೋತಿತ್ತು. ಆಗಿನ ನಾಯಕ ಸೌರವ್ ಗಂಗೂಲಿ (117) ಶತಕದ ಬಲದಿಂದ ಭಾರತ 6 ವಿಕೆಟ್ಗೆ 264 ರನ್ ಪೇರಿಸಿದ್ದರೆ, ಕ್ರಿಸ್ ಕೇರ್ನ್ಸ್ (102*) ಶತಕದ ನೆರವಿನಿಂದ ಕಿವೀಸ್ 49.4 ಓವರ್ಗಳಲ್ಲಿ 6 ವಿಕೆಟ್ಗೆ 265 ರನ್ ಗಳಿಸಿ ಜಯಿಸಿತ್ತು. ನಂತರ 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲೂ ಭಾರತ ತಂಡ ನ್ಯೂಜಿಲೆಂಡ್ ಎದುರು ಸೋತಿತ್ತು. ಕಿವೀಸ್ ಗೆದ್ದಿರುವ 2 ಐಸಿಸಿ ಟೂರ್ನಿಗಳಲ್ಲೂ ಭಾರತ ವಿರುದ್ಧವೇ ಫೈನಲ್ನಲ್ಲಿ ಜಯಿಸಿದೆ. ಹೀಗಾಗಿ ರೋಹಿತ್ ಶರ್ಮ ಪಡೆ ಈ ಬಾರಿ ಅವೆರಡೂ ಫೈನಲ್ಗಳಿಗೆ ಸೇಡು ತೀರಿಸಬೇಕಿದೆ. 2023ರ ಏಕದಿನ ವಿಶ್ವಕಪ್ ಸೆಮೀಸ್ ಮತ್ತು ಹಾಲಿ ಟೂರ್ನಿಯ ಲೀಗ್ ಹಂತದಲ್ಲಿ ಕಿವೀಸ್ ತಂಡವನ್ನು ಮಣಿಸಿದ ವಿಶ್ವಾಸವೂ ಭಾರತಕ್ಕಿದೆ.