ಉದ್ಯಾನದ ಊರಲಿ... ಸರಣಿ ಗೆಲುವಿನ ಕನಸಲಿ...

ಇಂದು ಭಾರತ-ವಿಂಡೀಸ್​ ಅಂತಿಮ ಟಿ20; ಮಳೆ ಭೀತಿಯ ನಡುವೆ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು
cricket
ಪಂದ್ಯಕ್ಕೆ ಸಜ್ಜಾಗಿರುವ ಚಿನ್ನಸ್ವಾಮಿ ಸ್ಟೇಡಿಯಂಪಿಟಿಐ
Published on: 

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಭರ್ಜರಿ ರನ್​ಮಳೆ ಸುರಿದಿರುವ ಭಾರತ ಮತ್ತು ಪ್ರವಾಸಿ ವೆಸ್ಟ್​ ಇಂಡೀಸ್​ ನಡುವಿನ ಟಿ20 ಸರಣಿಯ ನಿರ್ಣಾಯಕ 5ನೇ ಹಾಗೂ ಅಂತಿಮ ಪಂದ್ಯಕ್ಕೆ ಮಳೆ ಭೀತಿಯ ನಡುವೆ ಉದ್ಯಾನನಗರಿಯ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ. ಚುಟುಕು ಕ್ರಿಕೆಟ್​ ವಿಶ್ವ ಚಾಂಪಿಯನ್​ ಭಾರತ ತಂಡಕ್ಕೆ ಹಾಲಿ ಸರಣಿಯಲ್ಲಿ ವಿಂಡೀಸ್​ ತಂಡ ನಿರೀಕ್ಷೆಗಿಂತ ಅಧಿಕ ನಿಕಟ ಪ್ರತಿಸ್ಪರ್ಧೆಯೊಡ್ಡಿದ್ದು, 2-2 ಸಮಬಲ ಸಾಧಿಸಿದೆ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲಿ ಸರಣಿ ವಶಪಡಿಸಿಕೊಳ್ಳಲು ಶ್ರೇಯಸ್​ ಅಯ್ಯರ್​ ಪಡೆ ತನ್ನ ಪೂರ್ಣ ಸಾಮರ್ಥ್ಯದ ನಿರ್ವಹಣೆ ತೋರುವುದು ಅಗತ್ಯವಾಗಿದೆ. ಕಳೆದ ವರ್ಷದ ಕಾಲ್ತುಳಿತ ದುರಂತದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಮೊದಲ ಬಾರಿ ಅಂತಾರಾಷ್ಟ್ರೀಯ ಪಂದ್ಯವೊಂದಕ್ಕೆ ಆತಿಥ್ಯ ವಹಿಸಿಕೊಳ್ಳುತ್ತಿದೆ.

ಹೈದರಾಬಾದ್​ನಲ್ಲಿ ವಿಂಡೀಸ್​ಗೆ ಬೃಹತ್​ ಮೊತ್ತ ಬಿಟ್ಟುಕೊಟ್ಟಿದ್ದ ಭಾರತ, ಚೇಸಿಂಗ್​ನಲ್ಲಿ ಎಡವಿತ್ತು. ಸಂಜು ಸ್ಯಾಮ್ಸನ್​-ಅಭಿಷೇಕ್​ ಶರ್ಮ ವೈಯಕ್ತಿಕವಾಗಿ ಹೆಚ್ಚಿನ ರನ್​ ಗಳಿಸುತ್ತಿದ್ದರೂ, ಜೋಡಿಯಾಗಿ ದೊಡ್ಡ ಜತೆಯಾಟದ ಆರಂಭ ಒದಗಿಸಲು ಶಕ್ತರಾಗಿಲ್ಲ. ಇಶಾನ್​ ಕಿಶನ್​, ನಾಯಕ ಶ್ರೇಯಸ್​ ಅಯ್ಯರ್​, ಉಪನಾಯಕ ತಿಲಕ್​ ವರ್ಮ ಸ್ಥಿರ ನಿರ್ವಹಣೆ ತೋರಬೇಕಿದ್ದರೆ, ನಮನ್​ ಧೀರ್​ ಬ್ಯಾಟಿಂಗ್​ನಲ್ಲೂ ಮಿಂಚಬೇಕಿದೆ. ಚಿನ್ನಸ್ವಾಮಿ ಸ್ಟೇಡಿಯಂ ಸಾಂಪ್ರದಾಯಿಕವಾಗಿ ಬ್ಯಾಟಿಂಗ್​ ಸ್ನೇಹಿ ಎನಿಸಿದ್ದು, ಭಾರತದ ಬೌಲರ್​ಗಳಿಗೆ ಇದು ಮತ್ತಷ್ಟು ಸವಾಲೊಡ್ಡಲಿದೆ. ಅನನುಭವಿ ಬೌಲಿಂಗ್​ ವಿಭಾಗಕ್ಕೆ ಭುವನೇಶ್ವರ್​ ಸೇರ್ಪಡೆ ಬಲ ತುಂಬುವ ನಿರೀೆ ಇದೆ. ಎದುರಾಳಿ ನಾಯಕ ಶೈ ಹೋಪ್​ ಮತ್ತು ಶೆಾರ್ನ್​ ರುದರ್​ಫೋರ್ಡ್​ ಜತೆಗೆ ಆರ್​ಸಿಬಿ ಆಟಗಾರ ರೊಮಾರಿಯೊ ಶೆಫರ್ಡ್​ಗೆ ಭಾರತೀಯ ಬೌಲರ್ಸ್​ ಕಡಿವಾಣ ಹಾಕಿದರೆ ಅರ್ಧ ಪಂದ್ಯ ಗೆದ್ದಂತೆ ಆಗಲಿದೆ.

ಟೀಮ್​ ನ್ಯೂಸ್​

ಭಾರತ: ಅರ್ಷದೀಪ್​ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದು ಭಾರತಕ್ಕೆ ಚಿಂತೆಯ ವಿಷಯವಲ್ಲ. ಯಾಕೆಂದರೆ ಅನುಭವಿ ವೇಗಿ ಭುವನೇಶ್ವರ್​ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಭುವಿ 2012ರಲ್ಲಿ ಬೆಂಗಳೂರಿನಲ್ಲೇ ಟಿ20 ಆಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ಅವರ ಪುನರಾಗಮನವೂ ಬೆಂಗಳೂರಿನಲ್ಲೇ ಆದರೆ ವಿಶೇಷವಾಗಿರಲಿದೆ. ಉಳಿದಂತೆ ಭಾರತ ತಂಡದಲ್ಲಿ ಬೇರಾವುದೇ ಬದಲಾವಣೆಯ ಸಾಧ್ಯತೆ ಇಲ್ಲ.

ವೆಸ್ಟ್​ ಇಂಡೀಸ್​: ಸತತ ವೈಫಲ್ಯ ಕಾಣುತ್ತಿದ್ದ ಕಮಿಲಿ ಪೂರನ್​ ಬದಲಿಗೆ ಜೆವೆಲ್​ ಆಂಡ್ರ್ಯೋ ಕಣಕ್ಕಿಳಿಸಿದ ವಿಂಡೀಸ್​ ತಂಡದ ನಡೆ ಕಳೆದ ಪಂದ್ಯದಲ್ಲಿ ಯಶಸ್ಸು ಕಂಡಿತ್ತು. ರೊಮಾರಿಯೊ ಶೆರ್ಡ್​ ಕೂಡ ಗಾಯದಿಂದ ಚೇತರಿಸಿಕೊಂಡು ಮರಳಿದ್ದು ಬಲ ಹೆಚ್ಚಿಸಿತ್ತು. ಹೀಗಾಗಿ ವಿಂಡೀಸ್​ ಗೆಲುವಿನ ಕಾಂಬಿನೇಷನ್​ ಉಳಿಸಿಕೊಳ್ಳುವ ನಿರೀಕ್ಷೆ ಇದೆ.

ಆರಂಭ: ರಾತ್ರಿ 7.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​

ಅರ್ಷದೀಪ್​ಗೆ ಗಾಯ, ಭುವನೇಶ್ವರ್​ಗೆ ಸ್ಥಾನ

ಮುಂಬರುವ ನ್ಯೂಜಿಲೆಂಡ್​ ಪ್ರವಾಸದ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಅನುಭವಿ ವೇಗಿ ಭುವನೇಶ್ವರ್​ ಕುಮಾರ್​ ಇದೀಗ ಅದಕ್ಕೆ ಮೊದಲೇ ವೆಸ್ಟ್​ ಇಂಡೀಸ್​ ವಿರುದ್ಧದ 5ನೇ ಹಾಗೂ ಕೊನೇ ಪಂದ್ಯಕ್ಕೂ ಸೇರ್ಪಡೆಯಾಗಿದ್ದಾರೆ. ಎಡಗೈ ವೇಗಿ ಅರ್ಷದೀಪ್​ ಸಿಂಗ್​ ಭುಜ ನೋವಿನಿಂದ ಬಳಲುತ್ತಿರುವುದು ಇದಕ್ಕೆ ಕಾರಣವಾಗಿದೆ. ಅರ್ಷದೀಪ್​ 4ನೇ ಟಿ20 ಪಂದ್ಯದ ವೇಳೆ ಈ ಗಾಯಕ್ಕೊಳಗಾಗಿದ್ದು, ಕೊನೇ ಟಿ20ಗೆ ಫಿಟ್​ ಆಗುವುದು ಅನುಮಾನವೆನಿಸಿದೆ. ಅವರ ಬೌಲಿಂಗ್​ ಮಾಡುವ ಭುಜಕ್ಕೇ ಗಾಯವಾಗಿರುವುದರಿಂದ ಚೇತರಿಕೆಗೆ ಕನಿಷ್ಠ 3 ವಾರ ಬೇಕಾಗಬಹುದು ಎನ್ನಲಾಗಿದೆ. ಹೀಗಾಗಿ 36 ವರ್ಷದ ಭುವಿ ಕಿವೀಸ್​ ಪ್ರವಾಸಕ್ಕೆ ಮುನ್ನ ಬೆಂಗಳೂರಿನಲ್ಲೇ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಭುವಿ 4 ವರ್ಷಗಳ ಭಾರತ ತಂಡಕ್ಕೆ ಮರಳಿದ್ದಾರೆ. 2022ರ ನ.22ಕ್ಕೆ ನೇಪಿಯರ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಅವರು ಕೊನೆಯದಾಗಿ ಭಾರತ ಪರ ಟಿ20 ಪಂದ್ಯ ಆಡಿದ್ದರು. ಭಾರತ ಪರ 87 ಟಿ20ಯಲ್ಲಿ 90 ವಿಕೆಟ್​ ಕಬಳಿಸಿರುವ ಭುವಿ, ಬೆಂಗಳೂರಿನಲ್ಲಿ ಆರ್​ಸಿಬಿ ಪರವಾಗಿಯೂ ಹೆಚ್ಚಿನ ಪಂದ್ಯ ಆಡಿರುವ ಅನುಭವ ಹೊಂದಿರುವುದು ಕೂಡ ಭಾರತಕ್ಕೆ ಲಾಭದಾಯಕವೆನಿಸಿದೆ. ಸದ್ಯ ಬೆಂಗಳೂರಿನ ಮೋಡ ಕವಿದ ವಾತಾವರಣದಲ್ಲಿ "ಸ್ವಿಂಗ್​ ಕಿಂಗ್​' ಇನ್ನಷ್ಟು ಹೆಚ್ಚು ಪರಿಣಾಮಕಾರಿ ಆಗುವ ನಿರೀಕ್ಷೆ ಇದೆ.

2 ವರ್ಷಗಳ ಬಳಿಕ ಬೆಂಗಳೂರಲಿ...

ಕಳೆದ ವರ್ಷ ಆರ್​ಸಿಬಿ ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂ ಭಾರತ ತಂಡದ ಕಳೆದ ಸಾಲಿನ ತವರು ಋತುವಿನ ವೇಳೆ ಪಂದ್ಯ ಆತಿಥ್ಯದ ಅವಕಾಶದಿಂದ ವಂಚಿತವಾಗಿತ್ತು. ಇದೀಗ ಕೊನೆಗೂ 2 ವರ್ಷಗಳ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವೊಂದರ ಆತಿಥ್ಯಕ್ಕೆ ಸಜ್ಜಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನ ಜನಸಂದಣಿ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಗಳ ಅಭಿವೃದ್ಧಿಯ ಬಳಿಕ ಹಾಲಿ ವರ್ಷ ಐಪಿಎಲ್​ ವೇಳೆ ಆರ್​ಸಿಬಿ ಮತ್ತೆ ಆಡಿತ್ತು. ಆದರೆ ಭಾರತ ತಂಡ, 2024ರ ಅಕ್ಟೋಬರ್​ನಲ್ಲಿ (16-20) ನಡೆದ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದ ಬಳಿಕ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಪಂದ್ಯ ಆಡಲಿದೆ. 2024ರ ಜನವರಿ 17ಕ್ಕೆ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಕೊನೇ ಟಿ20 ಪಂದ್ಯ ಆಡಿತ್ತು.

*8: ಭಾರತ ತಂಡ ಬೆಂಗಳೂರಿನಲ್ಲಿ ಈ ಹಿಂದೆ ಆಡಿರುವ 8 ಟಿ20 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 3ರಲ್ಲಿ ಸೋತಿದ್ದರೆ, 1 ರದ್ದಾಗಿದೆ. ವಿಂಡೀಸ್​ 2016ರ ಟಿ20 ವಿಶ್ವಕಪ್​ನಲ್ಲಿ ಲಂಕಾ ವಿರುದ್ಧ ಇಲ್ಲಿ ಆಡಿತ್ತು. ಬೆಂಗಳೂರಿನಲ್ಲಿ ಭಾರತದ ವಿರುದ್ಧ ವಿಂಡೀಸ್​ಗೆ ಇದು ಮೊದಲ ಟಿ20 ಆಗಿದೆ.

ಪಿಚ್​ ವರದಿಯಲಿ...

ಸರಣಿಯ ಕಳೆದ 3 ಪಂದ್ಯಗಳಲ್ಲಿ ಉಭಯ ತಂಡಗಳೂ 200 ಪ್ಲಸ್​ ಮೊತ್ತ ಕಲೆಹಾಕಿದ್ದು, ಬೆಂಗಳೂರಿನಲ್ಲೂ ರನ್​ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಯಾಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಈಗಾಗಲೆ ಬ್ಯಾಟಿಂಗ್​ ಸ್ವರ್ಗವಾಗಿ ಗುರುತಿಸಲ್ಪಟ್ಟಿದೆ. ಆದರೆ ಕಳೆದ 2 ದಿನಗಳಿಂದ ಉದ್ಯಾನನಗರದಲ್ಲಿ ಮಳೆಯಾಗುತ್ತಿರುವುದು ಪಿಚ್​ ವರ್ತನೆಯಲ್ಲಿ ಬದಲಾವಣೆ ತಂದರೆ ಅಚ್ಚರಿ ಇಲ್ಲ. ಪಿಚ್​ ಹೆಚ್ಚಿನ ಸಮಯ ಹೊದಿಕೆಯಿಂದ ಮುಚ್ಚಿರಲ್ಪಟ್ಟಿರುವ ಕಾರಣ, ಹೆಚ್ಚಿನ ತೇವಾಂಶದಿಂದಾಗಿ ವೇಗಿಗಳಿಗೆ ಹೆಚ್ಚಿನ ನೆರವು ಒದಗಿಸುವ ಸಾಧ್ಯತೆಯೂ ಇದೆ. ಇದು ಬ್ಯಾಟರ್​ಗಳ ಅಬ್ಬರಕ್ಕೆ ಕಡಿವಾಣ ಹೇರಲಿದೆ. ಟಾಸ್​ ಮತ್ತೊಮ್ಮೆ ನಿರ್ಣಾಯಕ ಪಾತ್ರವಹಿಸಲಿದೆ.

ಮಳೆ ಭೀತಿಯಲಿ...

ಬೆಂಗಳೂರಿನಲ್ಲಿ ಕಳೆದ 2 ದಿನಗಳಿಂದ ಮಳೆಯಾಗಿದ್ದು, ಶನಿವಾರವೂ ಮಳೆ ಮುಂದುವರಿಯುವ ನಿರೀಕ್ಷೆ ಹೆಚ್ಚಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಶನಿವಾರ ಸಂಜೆ ಮತ್ತು ರಾತ್ರಿಯೇ ಮಳೆಯಾಗುವ ಸಾಧ್ಯತೆ ಶೇ.55ರಿಂದ 75ರಷ್ಟಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡಚಣೆ ತರುವ ಸಾಧ್ಯತೆ ಹೆಚ್ಚಿದೆ. ಆದರೆ, ಓವರ್​ ಕಡಿತಗೊಂಡರೂ, ಲಿತಾಂಶ ಬಾರದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಮಳೆ ಭೀತಿಯಿಂದಾಗಿ ಪ್ರೇಕ್ಷಕರ ಉತ್ಸಾಹವೂ ಕುಗ್ಗಿದ್ದು, ಶುಕ್ರವಾರದವರೆಗೂ ಟಿಕೆಟ್​ಗಳು ಸಂಪೂರ್ಣ ಮಾರಾಟವಾಗಿಲ್ಲ.

*98: ಸರಣಿಯಲ್ಲಿ ಇದುವರೆಗೆ 98 ಸಿಕ್ಸರ್​ಗಳು ಸಿಡಿದಿದ್ದು, ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ನಡುವಿನ ದ್ವಿಪಯ ಸರಣಿಯಲ್ಲಿ 120 ಸಿಕ್ಸರ್​ ಸಿಡಿದಿರುವುದು ಹಾಲಿ ದಾಖಲೆ. ಇದನ್ನು ಮುರಿಯಲು ಬೆಂಗಳೂರಿನಲ್ಲಿ 23 ಸಿಕ್ಸರ್​ ಬರಬೇಕಿದೆ.

24 ವರ್ಷಗಳ ಭದ್ರಕೋಟೆ ಕಾಯ್ದುಕೊಳ್ಳುವ ತವಕದಲಿ

ಭಾರತ ತಂಡ ಕಳೆದ 24 ವರ್ಷಗಳಿಂದ ವಿಂಡೀಸ್​ ವಿರುದ್ಧ ತವರಿನಲ್ಲಿ ಯಾವ ಮಾದರಿಯ ಸರಣಿಯಲ್ಲೂ ಸೋಲದ ಬಲಿಷ್ಠ ದಾಖಲೆ ಹೊಂದಿದೆ. 2002ರಲ್ಲಿ ಕೊನೆಯದಾಗಿ ವಿಂಡೀಸ್​ ತಂಡ ಭಾರತದಲ್ಲಿ ಕಾರ್ಲ್​ ಹೂಪರ್​ ಸಾರಥ್ಯದಲ್ಲಿ ಏಕದಿನ ಸರಣಿ ಗೆದ್ದಿತ್ತು. ನಂತರದ ಎಲ್ಲ ಸರಣಿಗಳಲ್ಲೂ ಭಾರತವೇ ಗೆದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net