ಇಂದು ನ್ಯೂಜಿಲೆಂಡ್​ ವಿರುದ್ಧ ಅಂತಿಮ ಟಿ20; ಹ್ಯಾಮಿಲ್ಟನ್​ನಲ್ಲಿ ಮತ್ತೆ ಗೆಲುವಿನ ಹಂಬಲ

ಭಾರತಕ್ಕೆ ಸರಣಿ ಜಯದ ಅಂತರ ಹಿಗ್ಗಿಸುವ ಗುರಿ
cricket
ತಿಲಕ್​ ವರ್ಮ ಅಭ್ಯಾಸಏಜೆನ್ಸಿ
Published on: 

ಹ್ಯಾಮಿಲ್ಟನ್​: ಕ್ಲೀನ್​ಸ್ವೀಪ್​ ಸಾಧಿಸುವ ಕನಸು ಆಕ್ಲೆಂಡ್​ನಲ್ಲಿ ಭಗ್ನಗೊಂಡ ಬಳಿಕ ಭಾರತ ತಂಡ ಮತ್ತೆ ಗೆಲುವಿನ ಹಾದಿಗೆ ಮರಳಿ ಟಿ20 ಸರಣಿಯನ್ನು ಸಂಭ್ರಮದಿಂದ ಕೊನೆಗೊಳಿಸುವ ಹಂಬಲದಲ್ಲಿದೆ. ಆತಿಥೇಯ ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯ 5ನೇ ಹಾಗೂ ಅಂತಿಮ ಟಿ20 ಪಂದ್ಯ ಭಾನುವಾರ ಸೆಡ್ಡನ್​ ಪಾರ್ಕ್​ ಸ್ಟೇಡಿಯಂನಲ್ಲಿ ನಡೆಯಲಿದ್ದು, ಶ್ರೇಯಸ್​ ಅಯ್ಯರ್​ ಪಡೆ ಗೆಲುವಿನ ಹಾದಿಗೆ ಮರಳಿ ಸರಣಿ ಗೆಲುವಿನ ಅಂತರವನ್ನು 4-1ಕ್ಕೆ ಏರಿಸಿಕೊಳ್ಳುವ ಅವಕಾಶ ಹೊಂದಿದೆ. ಈ ಗೆಲುವು ಭಾರತಕ್ಕೆ ಏಕದಿನ ಸರಣಿಗೆ ಮುನ್ನ ಆತ್ಮವಿಶ್ವಾಸವನ್ನೂ ತುಂಬಲಿದೆ.

ಸರಣಿ ಗೆಲುವಿನ ಬಳಿಕ ತುಸು ರಿಲ್ಯಾಕ್ಸ್​ ಆದಂತಿರುವ ಭಾರತ ತಂಡ 4ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್​-ಬೌಲಿಂಗ್​ ಎರಡೂ ವಿಭಾಗಗಳಲ್ಲಿ ನಿರಾಶಾದಾಯಕ ನಿರ್ವಹಣೆ ತೋರಿತ್ತು. ಮತ್ತೊಂದೆಡೆ ನ್ಯೂಜಿಲೆಂಡ್​ ತಂಡ ಎರಡೂ ವಿಭಾಗಗಳಲ್ಲಿ ಪುಟಿದೆದ್ದಿತ್ತು. ಗ್ಲೆನ್​ ಫಿಲಿಪ್ಸ್​ ಹಾಲಿ ಸರಣಿಯಲ್ಲಿ ಭಾರತದ ಪಾಲಿಗೆ ಕಂಟಕ ಎನಿಸಿದ್ದು, ಅವರಿಗೆ ಕಡಿವಾಣ ಹೇರಬೇಕಾದ ಅಗತ್ಯವಿದೆ.

ಟೀಮ್​ ನ್ಯೂಸ್​:

ಭಾರತ: ಆಕ್ಲೆಂಡ್​ನಲ್ಲಿ ಬೃಹತ್​ ಮೊತ್ತದ ಚೇಸಿಂಗ್​ ವೇಳೆ ಭಾರತ ತಂಡ ವೈಭವ್​ ಸೂರ್ಯವಂಶಿ ಅವರನ್ನು ಮಿಸ್​ ಮಾಡಿಕೊಂಡಿತ್ತು. ಇಶಾನ್​ ಕಿಶನ್​ ಫಿಟ್​ ಆಗಿ ಮರಳಿದ್ದರಿಂದ ವೈಭವ್​ ಹೊರಬಿದ್ದಿದ್ದರು. ಇದೀಗ ಅಂತಿಮ ಪಂದ್ಯಕ್ಕೆ ಮತ್ತೆ ಅವರು ತಂಡಕ್ಕೆ ಮರಳಿದರೆ, ಸಂಜು ಸ್ಯಾಮ್ಸನ್​ ಹೊರಬೀಳುವ ಸಾಧ್ಯತೆ ಇದೆ. ನಿತೀಶ್​ ರೆಡ್ಡಿಗೆ ವಿಶ್ರಾಂತಿ ನೀಡಿದರೆ, ಶಿವಂ ದುಬೆ ಕಣಕ್ಕಿಳಿಯಬಹುದು. ಪ್ರಿನ್ಸ್​ ಯಾದವ್​ ಬದಲಿಗೆ ಭುವನೇಶ್ವರ್​ ಮತ್ತೆ ಮರಳುವ ಸಾಧ್ಯತೆಯೂ ಇದೆ.

ನ್ಯೂಜಿಲೆಂಡ್​: ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್​ ತಂಡದ ಆಡುವ 11ರ ಬಳಗ ಸರಣಿಯಲ್ಲಿ ಬದಲಾಗುತ್ತಲೇ ಬಂದಿದೆ. ಇದೀಗ ಭಾರತ ವಿರುದ್ಧ ತವರಿನಲ್ಲಿ 10 ಟಿ20 ಪಂದ್ಯಗಳ ಬಳಿಕ ಗೆಲುವಿನ ಹಾದಿಗೆ ಮರಳಿರುವ ನ್ಯೂಜಿಲೆಂಡ್​ ಅದೇ ಕಾಂಬಿನೇಷನ್​ ಉಳಿಸಿಕೊಳ್ಳುವ ನಿರೀಕ್ಷೆ ಇದೆ.

*ಆರಂಭ: ಮಧ್ಯಾಹ್ನ 12.30

*ನೇರಪ್ರಸಾರ: ಸೋನಿ ಸ್ಪೋರ್ಟ್ಸ್​, ಸೋನಿ ಲಿವ್​.

ಬೌಲಿಂಗ್​ ವಿಭಾಗದ ಚಿಂತೆ

ಸರಣಿಯ ಮೊದಲ 3 ಪಂದ್ಯಗಳಲ್ಲೂ ಭಾರತದ ಬೌಲಿಂಗ್​ ನಿರ್ವಹಣೆ ಸಾಧಾರಣವಾಗಿತ್ತು. ಆದರೆ ಬ್ಯಾಟಿಂಗ್​ ವಿಭಾಗದ ಭರ್ಜರಿ ಚೇಸಿಂಗ್​ನಿಂದಾಗಿ ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ 4ನೇ ಟಿ20 ಪಂದ್ಯದಲ್ಲಿ ಬೃಹತ್​ ಮೊತ್ತ ಬಿಟ್ಟುಕೊಟ್ಟು ಪರಾಭವಗೊಂಡ ಬಳಿಕ ಭಾರತ ತಂಡದ ಬೌಲಿಂಗ್​ ವಿಭಾಗದ ಸಮಸ್ಯೆ ದೊಡ್ಡದಾಗಿ ಕಾಣಿಸುತ್ತಿದೆ. ನಿಜಕ್ಕಾದರೆ ಭಾರತದ ಬೌಲಿಂಗ್​ ವಿಭಾಗದ ದೌರ್ಬಲ್ಯ ಕಳೆದ ತವರಿನ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲೂ ಎದ್ದುಕಂಡಿತ್ತು. ಆಗ ವಿಂಡೀಸ್​ ಬ್ಯಾಟರ್​ಗಳು ಸರಾಗವಾಗಿ ರನ್​ಪ್ರವಾಹ ಹರಿಸಿದ್ದರು. ಕಿವೀಸ್​ ಪ್ರವಾಸದ ಸರಣಿಗೆ ಅನುಭವಿ ವೇಗಿ ಭುವನೇಶ್ವರ್​ ಕುಮಾರ್​ ಸೇರ್ಪಡೆಯಿಂದ ಬೌಲಿಂಗ್​ ವಿಭಾಗಕ್ಕೆ ಹೆಚ್ಚಿನ ಬಲ ಲಭಿಸುವ ನಿರೀೆ ಇಡಲಾಗಿತ್ತು. ಆದರೆ ಇದು ಹುಸಿಯಾಗಿದ್ದು, ಮೊದಲ 3 ಪಂದ್ಯಗಳ ದುಬಾರಿ ಬೌಲಿಂಗ್​ ಬಳಿಕ ಭುವಿ 4ನೇ ಪಂದ್ಯದಿಂದ ಹೊರಬಿದ್ದಿದ್ದರು. ಇದರಿಂದ ಎಡಗೈ ವೇಗಿ ಅರ್ಷದೀಪ್​ ಸಿಂಗ್​ ಮೇಲೆ ಬೌಲಿಂಗ್​ ವಿಭಾಗ ಹೆಚ್ಚು ಅವಲಂಬಿತವಾಗಿದೆ. ಕಳೆದ ಪಂದ್ಯದಲ್ಲಿ ಮಯಾಂಕ್​ ಯಾದವ್​ ಕೂಡ ಉತ್ತಮ ದಾಳಿ ನಡೆಸಿದ್ದರು. ಆದರೆ ಆಲ್ರೌಂಡರ್​ಗಳಾದ ನಿತೀಶ್​ ರೆಡ್ಡಿ, ನಮನ್​ ಧೀರ್​ ಮತ್ತು ಅಕ್ಷರ್​ ಪಟೇಲ್​ ಬೌಲಿಂಗ್​ನಲ್ಲಿ ದುಬಾರಿಯಾಗುತ್ತಿದ್ದಾರೆ. ಇದರಿಂದಾಗಿ ಭಾರತ ಈ ಬಾರಿ ತಜ್ಞ ಸ್ಪಿನ್ನರ್​ಗಳಾದ ಕುಲದೀಪ್​ ಯಾದವ್​ ಅಥವಾ ವರುಣ್​ ಚಕ್ರವರ್ತಿಗೆ ಮಣೆ ಹಾಕಬಹುದೇ ಎಂಬ ಕುತೂಹಲವಿದೆ.

ಶ್ರೇಯಸ್​ ರನ್​ಬರ

ತವರಿನ ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ ಬಳಿಕ ನಾಯಕ ಶ್ರೇಯಸ್​ ಅಯ್ಯರ್​ ಬ್ಯಾಟಿಂಗ್​ ನಿರ್ವಹಣೆ ಸಮಾಧಾನಕರವಾಗಿಲ್ಲ. ಕಳೆದ 8 ಇನಿಂಗ್ಸ್​ಗಳಲ್ಲಿ ಅವರು ಕ್ರಮವಾಗಿ 40, 1, 16, 22, 42, 7, 5, 22 ರನ್​ ಗಳಿಸಿದ್ದಾರೆ. ಇದರಿಂದಾಗಿ ತಂಡದ ಕೆಳಕ್ರಮಾಂಕ ಮತ್ತು ಆಲ್ರೌಂಡರ್​ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಇನ್ನು ಸಂಜು ಸ್ಯಾಮ್ಸನ್​ ಕೂಡ ಮೊದಲ ಪಂದ್ಯದ ಬಳಿಕ ಲಯ ತಪ್ಪಿದಂತಿದ್ದಾರೆ. ವೈಭವ್​ ಸೂರ್ಯವಂಶಿ ಬದಲಿಗೆ ಸ್ಥಾನ ಪಡೆದ ಇಶಾನ್​ ಕಿಶನ್​ ಲಯ ಕಂಡುಕೊಳ್ಳಬೇಕಿದೆ. ಉಪನಾಯಕ ತಿಲಕ್​ ವರ್ಮ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದಿದ್ದರೂ, ಉಪಯುಕ್ತ ನಿರ್ವಹಣೆಯನ್ನೇ ತೋರುತ್ತಿದ್ದಾರೆ.

ಪಿಚ್​ ರಿಪೋರ್ಟ್​

ಸೆಡ್ಡನ್​ ಪಾರ್ಕ್​ ಮೈದಾನವೂ ಹೈಸ್ಕೋರಿಂಗ್​ ತಾಣವಾಗಿ ಗುರುತಿಸಲ್ಪಟ್ಟಿದೆ. ಹೀಗಾಗಿ ಸರಣಿಯ ಕೊನೇ ಪಂದ್ಯದಲ್ಲೂ ರನ್​ಪ್ರವಾಹ ಮುಂದುವರಿಯುವ ನಿರೀಕ್ಷೆ ಇಡಬಹುದು. ಭಾರತ ಇಲ್ಲಿ ಆಡಿದ ಹಿಂದಿನ 2 ಪಂದ್ಯಗಳಲ್ಲೂ 170 ಪ್ಲಸ್​ ಮೊತ್ತ ಪೇರಿಸಿತ್ತು.

*2: ಭಾರತ ತಂಡ ಹ್ಯಾಮಿಲ್ಟನ್​ನಲ್ಲಿ ಇದುವರೆಗೆ ಆಡಿರುವ 2 ಟಿ20 ಪಂದ್ಯಗಳಲ್ಲಿ 1ರಲ್ಲಿ ಸೋತು, 1ರಲ್ಲಿ ಗೆದ್ದಿದೆ. ನ್ಯೂಜಿಲೆಂಡ್​ ಇಲ್ಲಿ ಆಡಿರುವ 14 ಟಿ20 ಪಂದ್ಯಗಳಲ್ಲಿ 11ರಲ್ಲಿ ಗೆದ್ದು, 3ರಲ್ಲಿ ಸೋತಿದೆ.

ಮೊದಲ 3 ಏಕದಿನಕ್ಕೂ ನಬಿ ಸೇರ್ಪಡೆ

ಜಮ್ಮು-ಕಾಶ್ಮೀರದ ವೇಗಿ ಅಕಿಬ್​ ನಬಿ ನ್ಯೂಜಿಲೆಂಡ್​ ಪ್ರವಾಸದ ಮೊದಲ 3 ಏಕದಿನ ಪಂದ್ಯಗಳಿಗೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿರುವ ಕನ್ನಡಿಗ ಪ್ರಸಿದ್ಧಕೃಷ್ಣ ಸ್ಥಾನವನ್ನು ಅವರು ತುಂಬಲಿದ್ದಾರೆ. ನಬಿ ಈಗಾಗಲೆ ಸರಣಿಯ ಕೊನೇ 2 ಪಂದ್ಯಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ನವೆಂಬರ್​ 4ರಿಂದ 5 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ನಬಿ ಕಳೆದ ತಿಂಗಳು ವೆಸ್ಟ್​ ಇಂಡೀಸ್​ ವಿರುದ್ಧ ಗುವಾಹಟಿಯಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.