

ನವದೆಹಲಿ: ಮಾರಕ ಕರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಕ್ರಿಕೆಟ್ ದಿಗ್ಗಜ ಸುನೀಲ್ ಗಾವಸ್ಕರ್ ಕೂಡ ಕೈಜೋಡಿಸಿದ್ದಾರೆ. ಕೋವಿಡ್-19 ಪರಿಹಾರ ನಿಧಿಗೆ ಗಾವಸ್ಕರ್ ಮಂಗಳವಾರ ಒಟ್ಟು 59 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಟೆಸ್ಟ್ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಕೂಡ ಗೌಪ್ಯ ಮೊತ್ತವನ್ನು ದೇಣಿಗೆ ನೀಡಿದ್ದಾರೆ.
ಹಾಲಿ ವೀಕ್ಷಕ ವಿವರಣೆಕಾರರಾಗಿರುವ ಗಾವಸ್ಕರ್ 35 ಲಕ್ಷ ರೂ.ಗಳನ್ನು ಪಿಎಂ-ಕೇರ್ಸ್ಗೆ ಮತ್ತು 24 ಲಕ್ಷ ರೂ.ಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ಗಾವಸ್ಕರ್ ಯಾವುದೇ ಮಾಹಿತಿ ಬಿಟ್ಟುಕೊಡದಿದ್ದರೂ, ಅವರ ಆಪ್ತ ಮೂಲಗಳಿಂದ ಮುಂಬೈ ರಣಜಿ ತಂಡದ ಮಾಜಿ ಆಟಗಾರ ಅಮೊಲ್ ಮುಜುಮ್ದಾರ್ ಟ್ವಿಟರ್ನಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಅದರ ಬೆನ್ನಲ್ಲೇ ಗಾವಸ್ಕರ್ ಪುತ್ರ ರೋಹನ್ ಗಾವಸ್ಕರ್, ‘ಈ ದೇಣಿಗೆಯನ್ನು ಕಳೆದ ವಾರವೇ ನೀಡಲಾಗಿದೆ. ಗಾವಸ್ಕರ್ರ ಭಾರತ ಪರ 35 ಶತಕಗಳ ಪ್ರತೀಕವಾಗಿ 35 ಲಕ್ಷ ರೂ. ಮತ್ತು ಮುಂಬೈ ಪರ 24 ಶತಕಗಳ ಪ್ರತೀಕವಾಗಿ 24 ಲಕ್ಷ ರೂ. ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಪೂಜಾರ ಪಿಎಂ-ಕೇರ್ಸ್ ಮತ್ತು ಗುಜರಾತ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಮೊತ್ತವನ್ನು ಹಂಚಿದ್ದು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರ ಸಹಿತ ಅಗತ್ಯ ಸೇವೆಯಲ್ಲಿರುವವರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.
ಪಿ. ಕಶ್ಯಪ್ 3 ಲಕ್ಷ ರೂ. ದೇಣಿಗೆ: ಬ್ಯಾಡ್ಮಿಂಟನ್ ತಾರೆ ಪಾರುಪಳ್ಳಿ ಕಶ್ಯಪ್ ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 3 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಯುವ ಗಾಲ್ಪರ್ ಟ್ರೋಫಿ ಮಾರಿ ದೇಣಿಗೆ: ಭಾರತದ ಯುವ ಗಾಲ್ಪ್ ಆಟಗಾರ ಅರ್ಜುನ್ ಭಾಟಿ ಕರೊನಾ ವಿರುದ್ಧದ ಹೋರಾಟಕ್ಕೆ 4.3 ಲಕ್ಷ ರೂ. ದೇಣಿಗೆ ನೀಡಲು ಮುಂದಾಗಿದ್ದಾರೆ. ಕಳೆದ 8 ವರ್ಷಗಳಲ್ಲಿ ತಾವು ಗೆದ್ದ 102 ಟ್ರೋಫಿಗಳನ್ನು ಮಾರಾಟ ಮಾಡಿರುವ ಅವರು, ಅದರಿಂದ ಬಂದ ಹಣವನ್ನು ಪಿಎಂ-ಕೇರ್ಸ್ಗೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ‘ದೇಶ ಈಗ ಕಠಿಣ ಸಮಯ ಎದುರಿಸುತ್ತಿದೆ. ಹೀಗಾಗಿ ಎಲ್ಲರೂ ಈಗ ದೇಶದ ಸೇವೆಗೆ ಮುಂದಾಗಬೇಕಿದೆ. ನನ್ನಂತೆಯೇ ಎಲ್ಲರೂ ತಮ್ಮಿಂದ ಆದ ಕೊಡುಗೆಗಳನ್ನು ನೀಡಿರಿ’ ಎಂದು 15 ವರ್ಷದ ಅರ್ಜುನ್ ಭಾಟಿ ಹೇಳಿದ್ದಾರೆ. -ಏಜೆನ್ಸೀಸ್