ಭಾರತ ಮಹಿಳೆಯರ ಚೊಚ್ಚಲ ಟೆಸ್ಟ್​ಗೆ 50 ವರ್ಷ

1976ರಲ್ಲಿ ಬೆಂಗಳೂರಿನಲ್ಲಿ ವಿಂಡೀಸ್​ ವಿರುದ್ಧ ನಡೆದಿದ್ದ ಪಂದ್ಯ
cricket
1976ರಲ್ಲಿ ಬೆಂಗಳೂರಿನಲ್ಲಿ ಟೆಸ್ಟ್ ಆಡಿದ ಭಾರತ-ವಿಂಡೀಸ್​ ತಂಡಗಳುಸಂಗ್ರಹ ಚಿತ್ರ
Published on: 

ಬೆಂಗಳೂರು: ಭಾರತದ ಮಹಿಳಾ ಕ್ರಿಕೆಟ್​ ತಂಡ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಶನಿವಾರಕ್ಕೆ 50 ವರ್ಷ ಪೂರ್ಣಗೊಂಡಿದೆ. 1976ರ ಅಕ್ಟೋಬರ್​ 31ರಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಭಾರತ ತಂಡ ತನ್ನ ಚೊಚ್ಚಲ ಟೆಸ್ಟ್​ ಪಂದ್ಯವನ್ನು ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ಆಡಿತ್ತು. ಕನ್ನಡತಿ ಶಾಂತಾ ರಂಗಸ್ವಾಮಿ ಸಾರಥ್ಯದಲ್ಲಿ ಆಡಿದ ಆ ತ್ರಿದಿನ ಪಂದ್ಯದಲ್ಲಿ ಭಾರತ ತಂಡ ಡ್ರಾ ಸಾಧಿಸಿತ್ತು. ಪಂದ್ಯಕ್ಕೆ 22 ಸಾವಿರ ಪ್ರೇಕ್ಷಕರು ಹಾಜರಾಗಿದ್ದರು. ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಶಾಂತಾ ರಂಗಸ್ವಾಮಿ ಸಿಡಿಸಿದ ಸಿಕ್ಸರ್​ ಬಿದ್ದ ಸ್ಟ್ಯಾಂಡ್​ ಈಗ ಅವರದೇ ಹೆಸರು ಹೊಂದಿರುವುದು ವಿಶೇಷವಾಗಿದೆ.

1934ರಲ್ಲಿ ಆಸ್ಟ್ರೆಲಿಯಾ-ಇಂಗ್ಲೆಂಡ್​ ನಡುವೆ ಬ್ರಿಸ್ಬೇನ್​ನಲ್ಲಿ ಮಹಿಳೆಯರ ಚೊಚ್ಚಲ ಟೆಸ್ಟ್​ ಪಂದ್ಯ ನಡೆದ 42 ವರ್ಷಗಳ ಬಳಿಕ ಭಾರತದ ಮಹಿಳೆಯರು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಮೊದಲು ಬ್ಯಾಟಿಂಗ್​ ಮಾಡಿದ ವೆಸ್ಟ್​ ಇಂಡೀಸ್​ ಮೊದಲ ದಿನ 78.4 ಓವರ್​ಗಳಲ್ಲಿ 274 ರನ್​ಗಳಿಗೆ ಆಲೌಟ್​ ಆಗಿತ್ತು. ಶುಭಾಂಗಿ ಕುಲಕರ್ಣಿ 48 ರನ್​ಗಳಿಗೆ 5 ವಿಕೆಟ್​ ಕಬಳಿಸಿದ್ದರು. 2ನೇ ದಿನ ಭಾರತ ತಂಡ ಶೋಭಾ ಪಂಡಿತ್​ ಗಳಿಸಿದ 69 ಮತ್ತು ಶಾಂತಾ ರಂಗಸ್ವಾಮಿ ಗಳಿಸಿದ 74 ರನ್​ ನೆರವಿನಿಂದ 6 ವಿಕೆಟ್​ಗೆ 269 ರನ್​ ಗಳಿಸಿತು. ಅಂತಿಮ ದಿನ ಮತ್ತೆ ಇನಿಂಗ್ಸ್​ ಮುಂದುವರಿಸದೆ ಡಿಕ್ಲೇರ್​ ಮಾಡಿಕೊಂಡಿತು. ಬಳಿಕ ವಿಂಡೀಸ್​ 2ನೇ ಇನಿಂಗ್ಸ್​ನಲ್ಲಿ 64.5 ಓವರ್​ಗಳಲ್ಲಿ 7 ವಿಕೆಟ್​ಗೆ 175 ರನ್​ ಗಳಿಸಿ ಡಿಕ್ಲೇರ್​ ಮಾಡಿಕೊಂಡಿತು. ಇದರಿಂದ ಗೆಲುವಿಗೆ 181 ರನ್​ ಗುರಿ ಪಡೆದ ಭಾರತ, 17 ಓವರ್​ಗಳಲ್ಲಿ 1 ವಿಕೆಟ್​ಗೆ 30 ರನ್​ ಗಳಿಸಿ ಡ್ರಾ ಸಾಧಿಸಿತು.

ಈ ಪಂದ್ಯಕ್ಕೆ ಮುನ್ನ ಭಾರತ 1975ರಲ್ಲಿ ಆಸ್ಟ್ರೆಲಿಯಾ, ನ್ಯೂಜಿಲೆಂಡ್​ಗೂ ತೆರಳಿ ತ್ರಿದಿನ ಪಂದ್ಯಗಳನ್ನು ಆಡಿದ್ದರೂ, ಅದಕ್ಕೆ ಅಧಿಕೃತ ಟೆಸ್ಟ್​ ಮಾನ್ಯತೆ ನೀಡಲಾಗಿರಲಿಲ್ಲ. ಭಾರತದ ಮಹಿಳೆಯರು ಕಳೆದ 5 ದಶಕಗಳಲ್ಲಿ ಇದುವರೆಗೆ 42 ಟೆಸ್ಟ್​ ಪಂದ್ಯಗಳನ್ನು ಆಡಿದ್ದರೂ, ಮೊದಲ ಪಂದ್ಯ ಈಗಲೂ ಅವಿಸ್ಮರಣೀಯವೆನಿಸಿದೆ.

ಶಾಂತಾಗೆ ರೇಷ್ಮೆ ಸೀರೆ ಗಿಫ್ಟ್​!

ತವರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಚೊಚ್ಚಲ ಟೆಸ್ಟ್​ನಲ್ಲಿ ಶಾಂತಾ ರಂಗಸ್ವಾಮಿ 74 ರನ್​ ಗಳಿಸಿದ್ದರು. ಅಲ್ಲದೆ ಅವರು ಸಿಡಿಸಿದ ಸಿಕ್ಸರ್​ ಎಲ್ಲರ ಮನಗೆದ್ದಿತ್ತು. ಇದಕ್ಕಾಗಿ ಅವರಿಗೆ ಪಂದ್ಯದ ಬಳಿಕ ರೇಷ್ಮೆ ಸೀರೆ ಉಡುಗೊರೆ ನೀಡಲಾಗಿತ್ತು.