

ವೆಸ್ಟ್ ಇಂಡಿಸ್ VS ಆಸ್ಟ್ರೇಲಿಯಾ: ಕ್ರಿಕೆಟ್ ಆಟ ಒಂದು ಪವಾಡದಂತೆ... ಒಂದೇ ಬಾಲ್, ಒಂದೇ ರನ್.. ಪಂದ್ಯದ ದಿಕ್ಕನ್ನೇ ಬದಲಿಸಬಹುದು. ಇದೀಗ ಇಂತದ್ದೇ ಘಟನೆ ಜಮೈಕಾದಲ್ಲಿ ಮಂಗಳವಾರ(ಜು.15) ರಂದು ನಡೆದಿದೆ.
ಹೌದು, ಜಮೈಕಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಹೀನಾಯ ಸೋಲು ಅನುಭವಿಸಿತು. ಆಸ್ಟ್ರೇಲಿಯಾ ತಂಡದ ವೇಗವನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ವಿಂಡೀಸ್ ಕೇವಲ 27 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಇದರಿಂದಾಗಿ ಈ ಪಂದ್ಯಕ್ಕೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ಕೇವಲ 15 ಎಸೆತಗಳಲ್ಲಿ 5 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅತಿ ವೇಗದಲ್ಲಿ 5 ವಿಕೆಟ್ ಪಡೆದ ಮೊದಲ ಆಸ್ಟ್ರೇಲಿಯಾದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದೇ ಸಮಯದಲ್ಲಿ, ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 400 ವಿಕೆಟ್‌ಗಳ ಮೈಲಿಗಲ್ಲನ್ನು ದಾಟಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ಪರ ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ 1955 ರಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಅನ್ನು 26 ರನ್‌ಗಳಿಗೆ ಆಲೌಟ್ ಮಾಡಿದಾಗ ದಾಖಲಾಗಿತ್ತು. ಪ್ರಸ್ತುತ ದಾಖಲೆಯೆಂದರೆ ವೆಸ್ಟ್ ಇಂಡೀಸ್ ಗಳಿಸಿದ 27 ರನ್‌ಗಳು, ಇದು ಎರಡನೇ ಕನಿಷ್ಠ ಸ್ಕೋರ್ ಆಗಿದೆ. ವೆಸ್ಟ್ ಇಂಡೀಸ್ ತಂಡವು ಕೇವಲ 14.3 ಓವರ್‌ಗಳಲ್ಲಿ ಆಲೌಟ್ ಆಗಿದ್ದು, ಇದು ಹೀನಾಯ ಸೋಲಿಗೆ ಸಾಕ್ಷಿಯಾಗಿದೆ.(ಏಜೆನ್ಸೀಸ್)